ಬಳ್ಳಾರಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ 150 ಜನರಿಗೆ ಮೊದಲೇ ಟಿಕೆಟ್ ಘೋಷಣೆ ಮಾಡುವ ಕಾರ್ಯ ಅಂತಿಮಘಟ್ಟ ತಲುಪಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಕೈಗೊಂಡ ಸೇವೆ, ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ ಸೇರಿ ಹಲವು ಮಾನದಂಡಗಳನ್ನು ಪರಿಗಣಿಸುವುದರ ಜತೆಗೆ ಹೊಸ ಮುಖಗಳಿಗೂ ಈ ಬಾರಿ ಟಿಕೆಟ್ ನೀಡಲಾಗುವುದು.
ಈ ಕುರಿತ ಸರ್ವೇ ವರದಿಗಳು ಕೈಸೇರಿದ್ದು, ಶೀಘ್ರದಲ್ಲೇ 150 ಜನರಿಗೆ ಮೊದಲೇ ಟಿಕೆಟ್ ಘೋಷಣೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಭಾನುವಾರ ಆಂಧ್ರದ ಗಡಿ ತಲುಪಲಿದೆ. ನಂತರ ಮಂತ್ರಾಲಯಕ್ಕೆ ತೆರಳಲಿದೆ. ಅಲ್ಲಿ ಪುನಃ ಪಾಲ್ಗೊಳ್ಳುತ್ತೇನೆ. ಪಾದಯಾತ್ರೆ ಯಶಸ್ಸು ನೋಡಿ ಬಿಜೆಪಿಗರಿಗೆ ತಡೆದುಕೊಳ್ಳಲಾಗದೆ ಜನರನ್ನು ಹಣಕೊಟ್ಟು ಕರೆಸಿದ್ದಾರೆ ಎನ್ನುತ್ತಿದ್ದಾರೆ. ಇದು ಸುಳ್ಳು. ಜನ ಬಿಜೆಪಿ ಆಡಳಿತದ ಬೆಲೆ ಏರಿಕೆ ನೀತಿಯಿಂದ ಬೇಸತ್ತು ಪಾದಯಾತ್ರೆಗೆ ಬೆಂಬಲಿಸಿದ್ದಾರೆ.
ನಮಗೆ ಈ ಬಾರಿ ಜನಾಶೀರ್ವಾದ ಖಚಿತ. 150 ಸೀಟು ಗೆಲ್ಲುತೇವೆ. ರಾಹುಲ್ ಗಾಂಧಿ ಹಾಗೂ ನನ್ನ ಬಗ್ಗೆ ಶ್ರೀರಾಮುಲು ಅವರಾಗಲಿ, ಬಿಜೆಪಿಯ ಯಾರೇ ಏನೇ ಮಾತಾಡಲಿ ಜನ ನಮ್ಮ ಕಡೆ ಇದ್ದಾರೆ ಅಷ್ಟು ಸಾಕು ಎಂದರು.