ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸುವ ಆಡಳಿತಾರೂಢ ಬಿಜೆಪಿ “ಅಸ್ತ್ರ’ದಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮತಬ್ಯಾಂಕ್ ಕೈ ತಪ್ಪುವ ಆತಂಕ ಎದುರಾಗಿದ್ದು, ಪರ್ಯಾಯ ಕಾರ್ಯತಂತ್ರದತ್ತ ಚಿತ್ತ ಹರಿಸಿವೆ.
ಭಾರತ್ ಜೋಡೋ ಯಾತ್ರೆಯ ಗುಂಗಿನಲ್ಲಿದ್ದ ಕಾಂಗ್ರೆಸ್, ಜನತಾಮಿತ್ರ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್ ಪಕ್ಷಗಳಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ದಿಢೀರ್ ಈ ರೀತಿಯ ತೀರ್ಮಾನ ಕೈಗೊಳ್ಳಬಹುದು ಎಂಬ ಅಂದಾಜು ಇರಲಿಲ್ಲ. ಪ್ರಮುಖವಾಗಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮೀಸಲಾತಿ ಪ್ರಮಾಣದ ವಿಚಾರ ಮುಂದಿಟ್ಟೇ ಬಿಜೆಪಿಯನ್ನು ಹಣಿಯುವ ಕಾರ್ಯತಂತ್ರ ರೂಪಿಸಿತ್ತು.
ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳಿಗೆ ಟಕ್ಕರ್ ನೀಡಲು ಬಿಜೆಪಿ ಪ್ರಬಲ ಅಸ್ತ್ರವನ್ನೇ ಬಳಸಿದ್ದು, ಇದರ ಬೆನ್ನಲ್ಲೇ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಿ ಪ್ರತಿ ಸಮಾವೇಶದಲ್ಲೂ ಇದೇ ವಿಚಾರ ಪ್ರಸ್ತಾವಿಸಿ ಸಮುದಾಯದ ಮತಬುಟ್ಟಿಗೆ ಕೈ ಹಾಕುತ್ತಿದೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಚಿಂತೆಗೀಡು ಮಾಡಿದೆ.
ಈಗ ಆತಂಕಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪರ್ಯಾಯ ಕಾರ್ಯತಂತ್ರಕ್ಕೆ ಮುಂದಾಗಿವೆ. ಮೀಸಲಾತಿ ಪ್ರಮಾಣ ಹೆಚ್ಚಿಸಲು ಮೊದಲಿನಿಂದಲೂ ನಮ್ಮ ಸಹಮತ ಮತ್ತು ಬೇಡಿಕೆ ಇದೆ ಎಂದು ಕಾಂಗ್ರೆಸ್, ಆಯೋಗ ರಚನೆ ಮಾಡಿದ್ದೇ ನಮ್ಮ ಅವಧಿಯಲ್ಲಿ ಎಂದು ಜೆಡಿಎಸ್ ನಮ್ಮದೂ ಪಾತ್ರ ಇದೆ ಎಂದು ಪ್ರತಿಪಾದಿಸಲಾರಂಭಿಸಿದೆ.
ಜತೆಗೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಸಮಾವೇಶ ಆಯೋಜಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.