Breaking News

ಬೆಳಗಾವಿ | ಯುವತಿ ಅನುಮಾನಾಸ್ಪದ ಸಾವು: ಅತ್ಯಾಚಾರ ಎಸಗಿ ಕೊಲೆ; ಪೋಷಕರ ಹೇಳಿಕೆ

Spread the love

ಬೆಳಗಾವಿ: ಜಿಲ್ಲೆಯ 19 ಯುವತಿಯೊಬ್ಬರು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಅನುಮಾನಾಸ್ಪದವಾಗಿ ಕೊನೆಯುಸಿರೆಳೆದಿದ್ದಾರೆ. ಈ ಯುವತಿ ಬೆಂಗಳೂರಿನ ಕಾಲ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ನಿತ್ರಾಣಗೊಂಡಿದ್ದ ಯುವತಿಯನ್ನು ಬುಧವಾರ ರಾತ್ರಿ ಯುವಕನೊಬ್ಬ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೋಗಿದ್ದ.

ಅವರ ಸ್ಥಿತಿ ಗಂಭೀರವಾದ್ದರಿಂದ ಕುಟುಂಬದವರು ನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಯುವತಿ ತಿಂಗಳ ಹಿಂದಷ್ಟೇ ಬೆಂಗಳೂರಿನ ಕಾಲ್‌ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಯುವತಿಯ ಪಾಲಕರು, ‘ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಸಾಯುವ ಸ್ಥಿತಿಯಲ್ಲಿ ತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಅವಳ ತಲೆಗೆ ಬಲವಾದ ಪೆಟ್ಟುಬಿದ್ದಿದೆ, ಮೈಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳು ಇವೆ’ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

‘ಅಕ್ಟೋಬರ್‌ 11ರಂದು ಮಗಳು ಫೋನ್‌ ಮಾಡಿದ್ದಳು. ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿರುವುದಾಗಿ ತಿಳಿಸಿದ್ದಳು. ಬಳಿಕ ಬೆಂಗಳೂರು ಬಸ್‌ ನಿಲ್ದಾಣದಿಂದ ಒಂದು ಸೆಲ್ಫಿ ಕೂಡ ಹಾಕಿದ್ದಳು. ಸೆಲ್ಫಿಯಲ್ಲಿ ಅವಳ ಮುಖ ಊದಿಕೊಂಡಂತೆ ಕಾಣುತ್ತಿತ್ತು. ಹಾಗಾಗಿ, ಈ ಸಾವಿನ ಬಗ್ಗೆ ತನಿಖೆ ನಡೆಸಬೇಕು’ ಎಂದೂ ಯುವತಿಯ ತಾಯಿ ಪೊಲೀಸರ ಮುಂದೆ ಪರಿಪರಿಯಾಗಿ ಬೇಡಿಕೊಂಡರು.

ಯುವಕ ಪರಾರಿ:

ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಯುವಕ ರಾತ್ರಿಯೇ ಪರಾರಿಯಾಗಿದ್ದಾನೆ. ನಂತರ ಯುವತಿಯ ಮೊಬೈಲ್‌ ಸಿಮ್‌ ಬಳಸಿ, ಅವರ ತಾಯಿಗೆ ವಾಟ್ಸ್‌ಆಯಪ್‌ ಮೆಸೇಜ್‌ ಕಳುಹಿಸಿದ್ದಾನೆ.

‘ಬಸ್ಸಿನಿಂದ ಇಳಿಸಬೇಕಾದರೆ ಅವರ (ಯುವತಿ) ಮೊಬೈಲ್‌ ಒಡೆದುಹೋಯಿತು. ಅದನ್ನು ಅವರ ಚಿಕ್ಕ ಬ್ಯಾಗಿನಲ್ಲಿ ಇಟ್ಟಿದ್ದೇನೆ. ಅವರ ಸಿಮ್‌ ನನ್ನ ಮೊಬೈಲಿಗೆ ಹಾಕಿ ಮೆಸೇಜ್‌ ಮಾಡುತ್ತಿದ್ದೇನೆ. ಅವರು ಹುಷಾರಾಗಿ ಇದ್ದಾರಾ? ಅಲ್ಲಿ ಪೊಲೀಸ್‌ ಕಂಪ್ಲೆಂಟ್‌ ಆಗುತ್ತದೆ ಎಂದು ಹೇಳುತ್ತಿದ್ದರು. ಹಾಗಾಗಿ, ನಿಮಗೆ ಭೇಟಿ ಆಗಲು ಆಗಲಿಲ್ಲ. ಹಾಗೇ ಬಂದುಬಿಟ್ಟೆ. ನಾನು ಅವರ ಸಿಮ್‌ ಮುರಿದು ಹಾಕುತ್ತೇನೆ. ನೀವು ಬೇರೆ ಸಿಮ್‌ ತೆಗೆದುಕೊಂಡು ಬಿಡಿ. ಪ್ಲೀಸ್‌ ನನಗೆ ತೊಂದರೆ ಮಾಡಬೇಡಿ’ ಎಂದು ಯುವಕ ಸಂದೇಶ ರವಾನಿಸಿದ್ದಾನೆ.

ಸದ್ಯ ಯುವಕನ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದ್ದು ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ