ಬೆಂಗಳೂರು: ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಆಗಾಗ ಅಸಮಾಧಾನ ಹೊರಹಾಕುವ ನವರಸನಾಯಕ ಜಗ್ಗೇಶ್, ಮತ್ತೊಮ್ಮೆ ಕನ್ನಡ ಕಲಾವಿದರ ವಿರುದ್ಧ ಗರಂ ಆಗಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಜಗ್ಗೇಶ್ ಅವರ ತೋತಾಪುರಿ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಭಾಗಿಯಾಗಿ ಮಾತನಾಡಿದ ಜಗ್ಗೇಶ್, ನಮ್ಮ ಕನ್ನಡ ಸಿನಿಮಾ ಮಂದಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದರು.
ಯಾವುದೋ ತಮಿಳು ಚಿತ್ರ ಅದ್ಭುತವಾಗಿ ಕಲೆಕ್ಷನ್ ಮಾಡುತ್ತಿದೆ. ರಜನಿಕಾಂತ್ರಂತಹ ಹಿರಿಯ ನಟರು ಅದ್ಭುತವಾಗಿ ಪ್ರಮೋಷನ್ ಮಾಡಿಕೊಟ್ಟಿದ್ದಾರೆ. ಆದರೆ ನಮ್ಮವರು ಯಾರು, ಯಾವ ಸಿನಿಮಾ ಬಗ್ಗೆಯೂ ಮಾತನಾಡಲ್ಲ. ಯಾರು, ಯಾರ ಬಗ್ಗೆನೂ ಮಾತನಾಡಬಾರದು ಅಂತಾ ನಮ್ಮವರು ಬೇಲಿ ಹಾಕ್ಕೊಂಡಿದ್ದಾರೆ. ಈ ರೀತಿಯ ವ್ಯಕ್ತಿತ್ವದಿಂದಾಗಿ ಒಂದು ದಿನ ಅನಾಥ ಭಾವ ಕಾಡುತ್ತದೆ ಎಂದರು.
ನಾನು 150 ಸಿನಿಮಾ ಮಾಡಿದ್ದೇನೆ. ಬೇರೆಯವರು ಸಹ ಮಾಡಲಿ. ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಪರಸ್ಪರ ಪ್ರೀತಿಸಬೇಕು ಮತ್ತು ಪರಸ್ಪರ ಸಿನಿಮಾ ಪ್ರಚಾರ ಮಾಡಬೇಕು. ಆಗ ಮಾತ್ರ ಸಿನಿಮಾ ದೊಡ್ಡ ಮಟ್ಟಕ್ಕೆ ತಲುಪಲು ಸಾಧ್ಯವಾಗುವುದು. ಕಾಲಿವುಡ್ನಲ್ಲಿ ಸಣ್ಣ ಕಲಾವಿದರಿಂದ ಹಿಡಿದು ದೊಡ್ಡ ದೊಡ್ಡ ಕಲಾವಿದರವರೆಗೂ ಒಂದಾಗುತ್ತಾರೆ. ಪರಸ್ಪರ ಸಿನಿಮಾಗಳನ್ನು ಪ್ರೋತ್ಸಾಹಿಸ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಾಮಮಾರ್ಗದಲ್ಲಿ ನನಗೆ ನೂರು ಆಟ ಗೊತ್ತಿದೆ
ಇದೇ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ಜಗ್ಗೇಶ್, ತೋತಾಪುರಿ ಚಿತ್ರ ಗಜಗಾಂರ್ಭೀಯದಿಂದ ಸಾಗುತ್ತಿದೆ. ವಾಮಮಾರ್ಗದಲ್ಲಿ ನನಗೆ ನೂರು ಆಟ ಗೊತ್ತಿದೆ. ಆದರೆ ಆ ಮಾರ್ಗದಲ್ಲಿ ನಡೆಯೋಕೆ ನನಗೆ ಇಷ್ಟ ಇಲ್ಲ. ಒಂದು ವಾರ ಹೌಸ್ಫುಲ್ ಓಡೋ ಥರ ಮಾಡೋದು ಗೊತ್ತು. ನನಗೆ ಆ ಸಾಮರ್ಥ್ಯ ಇದೆ. ಆದರೆ ಆ ರೀತಿ ನಾನು ಮಾಡಲ್ಲ. ಇತ್ತೀಚೆಗೆ ನಮ್ಮ ನಡುವೆ ನಕಲಿ ವಿಮರ್ಶೆ ಕೊಡುವವರು ಹುಟ್ಟುಕೊಂಡಿದ್ದಾರೆ. ದುಡ್ಡು ಕೊಟ್ರೆ ಚಿತ್ರ ಸೂಪರ್, ಬೊಂಬಾಟ್ ಅಂತ ಬರೀತಾರೆ. ನಾವು ದುಡ್ಡು ಕೊಟ್ಟು ನಮ್ಮ ಸಿನ್ಮಾ ಬಗ್ಗೆ ಬರೆಸೋಕೆ ಹೋಗಲ್ಲ. ಜನ ಹರಸಿ, ಹಾರೈಸಿದ್ದಾರೆ ಅಷ್ಡೇ ಸಾಕು ನಮಗೆ ಎಂದರು.