ಮಂಗಳೂರು: ಅಸೌಖ್ಯದಿಂದ ಬಳಲುತ್ತಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಹವ್ಯಾಸಿ ಭಾಗವತರಾಗಿಯೂ, ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು.
ತನ್ನ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಅಭಿಮಾನಿಗಳನ್ನು ಗೆದ್ದಿದ್ದ ಅವರು ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಟ್ಠಲ ಶಾಸ್ತ್ರಿ, , ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳಲ್ಲದೆ ಹಲವು ಪುರಸ್ಕಾರಗಳನ್ನು ಪಡೆದಿದ್ದರು.
ತಿರುಮಲೇಶ್ವರ ಶಾಸ್ತ್ರಿ ಅವರು ಪುತ್ರ-ಹವ್ಯಾಸಿ ಭಾಗವತ-ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.