ಕಲಬುರಗಿ: ನಗರದ ಹಲವು ಕಡೆ ರಸ್ತೆಗಳು ಹದಗೆಟ್ಟಿವೆ. ದುರಸ್ತಿ ಪ್ರಕ್ರಿಯೆ ನಡೆಯುತ್ತಿಲ್ಲ. ಆದರೆ, ಸುಸ್ಥಿತಿಯಲ್ಲಿರುವ ರಸ್ತೆ ಮೇಲೆಯೇ ಶನಿವಾರ ಡಾಂಬರು ಹಾಕಲಾಗಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ₹ 1.25 ಕೋಟಿ ಖರ್ಚು ಮಾಡಿದೆ!
ಹೊಸ ಆರ್‌ಟಿಒ ಕಚೇರಿಯ ಗೇಟ್ ಸಮೀಪದ ಕುಸನೂರ ರಸ್ತೆಯ 3 ಕಿ.ಮೀ. ಉದ್ದ ಡಾಂಬರ್ ಹಾಕಲಾಗಿದೆ. ಆದರೆ, ಇಡೀ ರಸ್ತೆಯಲ್ಲಿ ಸಣ್ಣ ಪುಟ್ಟ ತಗ್ಗು, ಸ್ಪೀಡ್ ಬ್ರೇಕರ್ ಹೊರತುಪಡಿಸಿ ರಸ್ತೆ ಸುಸ್ಥಿತಿಯಲ್ಲಿದೆ. ಆರ್‌ಟಿಒ ಕಚೇರಿ ಎದುರಿನ ಈ ರಸ್ತೆಯಲ್ಲಿ ಚರಂಡಿ ನೀರು ಹರಿಯುತಿತ್ತು. ಅಲ್ಲಿ ಕಲ್ವರ್ಟ್ ನಿರ್ಮಿಸಿ ರಸ್ತೆ ಎತ್ತರಿಸಲಾಗಿದೆ. ಇದು ಆಗಿ ತಿಂಗಳಾನುಗಟ್ಟಲೇ ಕಲ್ವರ್ಟ್ ಅಕ್ಕಪಕ್ಕ ಡಾಂಬರೀಕರಣ ಮಾಡಿ ದುರಸ್ತಿ ಮಾಡುವ ಗೋಜಿಗೆ ಹೋಗಿರಲಿಲ್ಲ.
‘ಪ್ರಜಾವಾಣಿ’ ಈ ಕುರಿತು ವರದಿ ಪ್ರಕಟಿಸಿದ ಬಳಿಕ ಕಲ್ವರ್ಟ್ ಸುತ್ತಲೂ ರಸ್ತೆ ದುರಸ್ತಿ ಮಾಡಲಾಯಿತು. ಅದಾದ ಕೆಲ ದಿನಗಳಲ್ಲಿಯೇ ಅಲ್ಲಿ ಮತ್ತೆ ತಗ್ಗುಗಳು ಕಂಡು ಬಂದವು.
2009ರಲ್ಲಿ ರಸ್ತೆ ನಿರ್ಮಾಣ: ಕಲಬುರಗಿಯ ರಿಂಗ್ ರಸ್ತೆಯಿಂದ ಕುಸನೂರು ಗ್ರಾಮವನ್ನು ಸಂಪರ್ಕಿಸುವ ಈ ರಸ್ತೆಯನ್ನು 2009ರಲ್ಲೇ ಮೊದಲ ಬಾರಿಗೆ ನಿರ್ಮಿಸಲಾಗಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರು ಕಲಬುರಗಿಗೆ ಭೇಟಿ ನೀಡಿದ್ದ ವೇಳೆ ಬುದ್ಧ ವಿಹಾರ ಉದ್ಘಾಟನೆಗೆ ತೆರಳಲು ಈ ರಸ್ತೆ ಆಯ್ಕೆ ಮಾಡಲಾಗಿತ್ತು. ನಂತರ ಬಳಿಕ ಹಲವು ಬಾರಿ ದುರಸ್ತಿ ಕಾರ್ಯ ನಡೆದಿದ್ದು, ಈಗಲೂ ಸುಸ್ಥಿತಿಯಲ್ಲಿದೆ.
‘ಶನಿವಾರ ಬೆಳಿಗ್ಗೆ ರಸ್ತೆಯಲ್ಲಿ ಜನರು ಸಂಚರಿಸುತ್ತಿದ್ದರೂ ಲೆಕ್ಕಿಸದೇ ತರಾತುರಿಯಲ್ಲಿ ಡಾಂಬರು ಹಾಕಲಾಗಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಗಳ ಡಾಂಬರೀಕರಣ ಕಾರ್ಯ ನಡೆಯುತ್ತದೆ’ ಎಂದು ಪೂಜಾ ಕಾಲೊನಿ ನಿವಾಸಿ ಚನ್ನಬಸಪ್ಪ ತಿಳಿಸಿದರು.
‘3 ಕಿ.ಮೀ. ರಸ್ತೆಯ ದುರಸ್ತಿ ಕಾಮಗಾರಿಯನ್ನು ₹ 1.25 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇಲಾಖೆಯ ಅಪೆಂಡಿಕ್ಸ್ ಲೆಕ್ಕ ಶೀರ್ಷಕೆಯಡಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಂಟೆಪ್ಪ ತಿಳಿಸಿದರು.