ಹುಬ್ಬಳ್ಳಿ: ಪಿಎಫ್‌ಐ ಸಂಘಟನೆ ನಿಷೇಧ ಕುರಿತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರಿಗೆ ಒಳಗೊಳಗೆ ಕುದಿಯುತ್ತಿದೆ. ಆದರೆ ಬಹಿರಂಗ ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ವಿನಾಕಾರಣ ಒತ್ತಾಯಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ನಿಷೇಧ ಕಾಂಗ್ರೆಸ್ ನವರಿಗೆ ನೋವು ತರಿಸಿದೆ. ಆದರೆ ಪಿಎಫ್‌ಐ ವಿರುದ್ಧ ಸಾಕ್ಷ್ಯಗಳು ಎಷ್ಟು ಬಲವಾಗಿವೆ ಎಂದರೆ, ಕಾಂಗ್ರೆಸ್ ನವರು ನಿಷೇಧ ಬಹಿರಂಗ ವಿರೋಧಿಸುವುದಕ್ಕೂ ಸಾಧ್ಯವಾಗದಾಗಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿಎಫ್‌ಐ ವಿರುದ್ಧದ 175 ಕೇಸ್ ಗಳನ್ನು ಹಿಂತೆಗೆದುಕೊಂಡಿತ್ತು.ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರಿಗೆ ಪ್ರೀತಿ ಇತ್ತು. ಕಾಂಗ್ರೆಸ್ ಮತಬ್ಯಾಂಕ್ ಭಯ ಕಾಂಗ್ರೆಸ್ ಗೆ ಕಾಡುತ್ತಿದೆ. ಇದೇ ಕಾಂಗ್ರೆಸ್ ಮೂರು ಬಾರಿ ಆರ್ ಎಸ್‌ಎಸ್ ನ್ನು ನಿಷೇಧಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳು ದೊರಕಿರಲಿಲ್ಲ. ರಾಷ್ಟ್ರೀಯ ಹಿತಾಸಕ್ತಿ ಎಂದು ಬಂದಾಗ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳದು, ಪಿಎಫ್‌ಐ ನಂತೆ ಎಸ್ ಡಿಪಿಐ ವಿರುದ್ಧ ಕ್ರಮಕ್ಕೆ ಸಿದ್ದವಿದೆ. ಆದರೆ ಅದು ರಾಜಕೀಯ ಪಕ್ಷವಾಗಿದ್ದರಿಂದ ನಿಷೇಧ ಸುಲಭವಾಗದು. ಆದರೆ ಕಾಂಗ್ರೆಸ್ ಗೆ ರಾಜಕಾರಣ, ಮತಬ್ಯಾಂಕ್ ಮುಖ್ಯವಾಗಿದೆ ಎಂದರು.