ಬೆಳಗಾವಿ: ರಮೇಶ್ ಜಾರಕಿಹೊಳಿ ಖಂಡಿತವಾಗಿಯೂ ಮತ್ತೆ ಸಚಿವರಾಗುತ್ತಾರೆ. ಯಾವಾಗ ಆಗಲಿದ್ದಾರೆ ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಹಾಲಿ ಬಿಜೆಪಿ ಶಾಸಕರ ಮತಕ್ಷೇತ್ರದಲ್ಲಿ ಅವರನ್ನು ಬದಲಾಯಿಸುವ ಪ್ರಶ್ನೆಯಿಲ್ಲ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದರೆ, ಅದು ಪಕ್ಷದ ಶಕ್ತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ, ಐಟಿ ಎಲ್ಲರ ತನಿಖೆ ಮಾಡುತ್ತವೆ. ಪ್ರಾಮಾಣಿಕವಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ತನಿಖೆಗೆ ತೆರಳಿ ಉತ್ತರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ನವರ ಆಡಳಿತದ ವೇಳೆ ಎಲ್ಲರ ಮೇಲೂ ತನಿಖೆ ಆಗಿದೆ. ಹಾಗಂತ ಎಲ್ಲರೂ ಹೆದರಿದ್ದಾರಾ? ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ 9 ಗಂಟೆಗಳ ಕಾಲ ತನಿಖೆ ಮಾಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿಶ್ ಶಾರನ್ನ ಜೈಲಿಗೆ ಹಾಕಿದ್ದರು. ಆಗ ನಾವು ಪ್ರತಿಭಟನೆ ಮಾಡಿದ್ಧೆವಾ? ಆದರೆ ಇವರ ಸಮಸ್ಯೆ ನೋಡಿ, ಜೈಲಿಗೆ ಹೋಗಿ ಬಂದ ಮೇಲೆಯೂ ಅವರನ್ನು ಮೆರವಣಿಗೆ ಮಾಡಲಾಗುತ್ತದೆ. ಅಲ್ಲದೆ, ಐಟಿ ದಾಳಿ ನಡೆದರೆ ಜನರನ್ನು ಸೇರಿಸಿ ಬೊಬ್ಬೆ ಹಾಕುತ್ತಾರೆ ಎಂದು ಟೀಕಿಸಿದರು.
ನಮ್ಮದು, ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿಯವರ ಗುರಿ ಒಂದೇ ಇದೆ. ಮುಂದಿನ ಚುನಾವಣೆಯಲ್ಲಿ ಬೆಳಗಾವಿಯಲ್ಲಿ18 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿಯಿದೆ. ರಮೇಶ್ ಜಾರಕಿಹೊಳಿಯವರು ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ರಾಜಕೀಯ ಸನ್ಯಾಸತ್ವ ಕೊಡಿಸುವ ಸಂಕಲ್ಪ ತೆಗೆದುಕೊಂಡಿದ್ದಾರೆ ಎಂದರು.
Laxmi News 24×7