ಬೆಂಗಳೂರು: ಸರ್ಕಾರ ಮಾಡುವ ಕೆಲಸವನ್ನು ಹಿರಿಯ ನಟಿ ಲೀಲಾವತಿ ಅವರು ಮಾಡಿದ್ದಾರೆ. ಆಸ್ಪತ್ರೆಗೆ ಬೇಕಾದ ಸೌಕರ್ಯಗಳು, ಸೌಲಭ್ಯಗಳು, ಸಿಬ್ಬಂದಿಗಳನ್ನು ಒದಗಿಸುವ ಪ್ರಾಮಾಣಿಕ ಕೆಲಸ ಸರ್ಕಾರದಿಂದ ಮಾಡುತ್ತೇವೆ. ಆಸ್ಪತ್ರೆಯ ಉದ್ಘಾಟನೆಗೆ ಬರದಿದ್ದರೆ ನಮ್ಮ ಹುದ್ದೆಯ ಘನತೆಗೆ ಚ್ಯುತಿ ಬರುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಲದೇವನಹಳ್ಳಿ ಗ್ರಾಮದಲ್ಲಿ ಹಿರಿಯ ನಟಿ ಲೀಲಾವಲಿ ಅವರು ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಆಗಬೇಕಾಗಿದೆ ಎಂದು ಲೀಲಾವತಿ ಅವರು ಮನವಿ ಮಾಡಿದ್ದಾರೆ. ನಿಮ್ಮ ಎಲ್ಲಾ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ. ಲೀಲಾವತಿ ಅವರು ಇಲ್ಲಿಗೆ ಬಂದು ತೋಟ ಮಾಡಿದಾಗ ನೆಲ ಸಮತಟ್ಟು ಇರಲಿಲ್ಲ. ಆದರೆ ಅವರ ಮನಸ್ಸು ಸಮತಟ್ಟಾಗಿದೆ. ಹೀಗಾಗಿ ಸಮಾಜಕ್ಕೆ ಆಸ್ಪತ್ರೆ ಕಟ್ಟಿಸಿಕೊಡಲು ಸಾಧ್ಯವಾಯಿತು ಎಂದರು
ಲೀಲಾವತಿಯವರ ಚಲನಚಿತ್ರ ನೋಡದೆ ಇರುವವರು ಕರ್ನಾಟಕದಲ್ಲಿ ಯಾರು ಇಲ್ಲ. ಎಲ್ಲಾ ಬಗೆಯ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಸವಾಲುಗಳನ್ನು ಮೆಟ್ಟಿ ನಿಂತು ಚಲನಚಿತ್ರರಂಗದಲ್ಲಿ ತಾರೆಯಾಗಿ ಉಳಿದಿದ್ದಾರೆ ಎಂದು ಹೇಳಿದರು.
ನನಗಿಂದು ಅತೀವ ಸಂತೋಷವಾಗುತ್ತಿದೆ. ದೇವರ ಇಚ್ಚೆಯಂತೆ ಮುಖ್ಯಮಂತ್ರಿ ಅವರು ಅಭಿಮಾನದಿಂದ ಬಂದು ಆಸ್ಪತ್ರೆ ಉದ್ಘಾಟಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಸಮಾಜಕ್ಕೆ ನನ್ನಿಂದ ಸಾಧ್ಯವಾದ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಹಿರಿಯ ನಟಿ ಲೀಲಾವತಿ ಹೇಳಿದರು.
ಲೀಲಾವತಿ ಅಮ್ಮನರು ಈ ಗ್ರಾಮದಲ್ಲಿರುವುದೇ ಇಲ್ಲಿನ ಜನರ ಪುಣ್ಯ. ಇಂದು 10 ರೂಪಾಯಿ ಬಂಡವಾಳ ಹೂಡಿ 10 ರುಪಾಯಿ ಲಾಭ ಮಾಡುವ ಜನರಿದ್ದಾರೆ. ಆದರೆ ಲೀಲಾವತಿ ಅವರು ಚೆನೈನಲ್ಲಿದ್ದ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಹಣ ಹಾಗೂ ಕೂಡಿಟ್ಟ ಹಣದಿಂದ ಆಸ್ಪತ್ರೆ ನಿರ್ಮಾಣ ಮಾಡಿರೋದು ಸಂತಸದ ಸಂಗತಿ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.
ಈ ಸಂದರ್ಭದಲ್ಲಿ ನಟ ವಿನೋದ್ ರಾಜ್, ಫಿಲ್ಮ್ ಚೇಂಬರ್ಸ್ ಅಧ್ಯಕ್ಷ ಭಾಮ ಹರೀಶ್, ಜಿಲ್ಲಾಧಿಕಾರಿ ಲತಾ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.