ಬೆಂಗಳೂರು: ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಟ್ರೈನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಪ್ಪ ಅಣ್ಣಪ್ಪ ಅಂಬಿ ಆತ್ಮಹತ್ಯೆಗೆ ಶರಣಾಗಿರುವ ಯುವಕ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಪ್ಪ, ಆರು ತಿಂಗಳಿಂದ ಮಡಿವಾಳದಲ್ಲಿರುವ ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಸೆ.25ರಂದು ಹೊರಗಡೆ ಹೋದಾಗ ನಾಪತ್ತೆಯಾಗಿದ್ದರು. ಈ ಸಂಬಂಧ ಬೆಟಾಲಿಯನ್‌ನ ಹಿರಿಯ ಅಧಿಕಾರಿಗಳು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಸೆ.26ರಂದು ಸಂಜೆ ಬೆಟಾಲಿಯನ್‌ನ ಬ್ಯಾರಕ್‌ಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಚಿಕ್ಕಪ್ಪನ ಮೃತದೇಹ ಪತ್ತೆಯಾಗಿದೆ. ಸದ್ಯ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಶಂಕೆ: ಚಿಕ್ಕಪ್ಪ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆ ಜತೆ ಕೆಲ ದಿನಗಳ ಹಿಂದಷ್ಟೇ ಜಗಳ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಅದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜತೆಗೆ ಕೆಲ ತಿಂಗಳಿಂದಲೂ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಆತನ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ.