ಬೆಂಗಳೂರು: ಕಾಂಗ್ರೆಸ್ ಪಕ್ಷ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತ ನಡೆಸಿತ್ತು ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಕಾಲದ ಹಗರಣಗಳ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿಕೊಂಡು ಓಡಾಡಿದ ಖ್ಯಾತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ದೂರಿದೆ.
‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಲ್ಲ ಯೋಜನೆಗಳಲ್ಲೂ ಹಗರಣ ನಡೆದಿದೆ. ಶಿಕ್ಷಕರ ಅಕ್ರಮ ನೇಮಕಾತಿ ಹಗರಣದಲ್ಲಿನ ಕಮಿಷನ್, ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಕಮಿಷನ್, ಬಿಬಿಎಂಪಿಯಲ್ಲಿ ನಡೆಸಿದ ₹1400 ಕೋಟಿ ಹಗರಣದ ಕಮಿಷನ್, ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಕಲ್ಲು ಗಣಿಕಾರಿಕೆ, ಮರಳು ದಂಧೆ, ಟ್ರಾನ್ಸ್‌ಫರ್ ದಂಧೆ, ಸಿದ್ದರಾಮಯ್ಯ ಅವರೇ, ಇದಕ್ಕೆಲ್ಲಾ ಪಡೆದ ಕಮಿಷನ್ ಎಷ್ಟು’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರೇ, ನಾಗಾರ್ಜುನ ಕಂಪನಿಯಿಂದ ಶೇ 15ರಷ್ಟು ಕಮಿಷನ್ ಪಡೆದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕೈ ಹಾಕಿದ ಸತ್ಯಸಂಗತಿ ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದ್ದು ಮರೆತು ಹೋಯಿತೇ?, ನಿಮ್ಮ ಅವಧಿಯ ಕಾಂಗ್ರೆಸ್ ಸರ್ಕಾರ ಶೇ 100ರಷ್ಟು ಕಮಿಷನ್ ಸರ್ಕಾರ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು’ ಎಂದು ಬಿಜೆಪಿ ಟೀಕಿಸಿದೆ.