ಬೆಂಗಳೂರು, ಸೆ. 15: ನಗರದಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಮತ್ತು ಪ್ರವಾಹ ಕೆಲ ಪ್ರದೇಶಗಳಲ್ಲಿ ಜನಜೀವನವನ್ನು ಅಲುಗಾಡಿಸಿದೆ. ದೊಡ್ಡ ದೊಡ್ಡ ಲೇಔಟ್‌ಗಳಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಶ್ರೀಮಂತರೂ ನಲುಗಿ ಹೋಗಿದ್ದರು. ಎತ್ತರದ ಕಟ್ಟಡದಿಂದ ನಿಂತು ನೋಡಿದರೆ ಇಡೀ ಪ್ರದೇಶವೇ ಕೆರೆ ಎಂಬಂತೆ ಭಾಸವಾಗುತ್ತಿತ್ತು ಆವತ್ತಿನ ದಿನಗಳ ದೃಶ್ಯ.
ವಿಲ್ಲಾಗಳ ಒಳಗೆ ನೀರು ನುಗ್ಗಿದ್ದು, ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿಹೋಗಿದ್ದು, ಇವೆಲ್ಲವೂ ರಾಷ್ಟ್ರಾದ್ಯಂತ ಗಮನ ಸೆಳೆಯಿತು. ಐಟಿ ವಲಯದಲ್ಲೇ ಹೆಚ್ಚಾಗಿ ಈ ಅವಾಂತರ ಆಗಿದ್ದು. ಮಳೆಯಿಂದಾಗಿ ಬೆಂಗಳೂರಿನ ಐಟಿ ಕಂಪನಿಗಳು ನೂರಾರು ಕೋಟಿ ರೂ ನಷ್ಟ ಮಾಡಿಕೊಂಡಿವೆ. ಇನ್ನು, ನಿವಾಸಿಗಳು ಅನುಭವಿಸಿದ ನಷ್ಟಗಳೂ ಕೋಟ್ಯಂತರ.
ನಿನ್ನೆ ಮೊನ್ನೆ ಮಳೆ ರಾಚಿದೆಯಾದರೂ ಸೆಪ್ಟೆಂಬರ್ 5ರಿಂದ 8ರವರೆಗೆ ಸುರಿದ ಮಳೆ ಬೆಂಗಳೂರಿನ ಔಟರ್ ರಿಂಗ್ ರಸ್ತೆ, ಸರ್ಜಾಪುರ ಇತ್ಯಾದಿ ಪ್ರದೇಶಗಳಲ್ಲಿ ಜನರನ್ನು ಹೈರಾಣಗೊಳಿಸಿತು. ಇದೇ ವೇಳೆ, ಬೆಂಗಳೂರಿನ ಮಹಾಮಳೆ ಕೇವಲ ಜನಜೀವನ ಮಾತ್ರವಲ್ಲ ವಿಮಾ ಕಂಪನಿಗಳನ್ನೂ ಹೈರಾಣಗೊಳಿಸಿದೆ.