ಮರಾಠಾ ಸಮಾಜ ಅಭಿವೃದ್ಧಿ ನಿಗಮದಿಂದ ಈವರೆಗೆ ಒಬ್ಬ ವಿದ್ಯಾರ್ಥಿಗೂ ಯಾವುದೇ ರೀತಿ ಉಪಯೋಗ ಆಗಿಲ್ಲ ಎಂದು ಸದನದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಮಾಡಲಾಗಿದೆ. ಇದರಲ್ಲಿ ಎಷ್ಟು ಯೋಜನೆಗಳು ಇವೆ..? ಅವುಗಳಿಂದ ಎಷ್ಟು ಜನರಿಗೆ ಲಾಭ ಆಗಿದೆ ಎಂದು ನಾನು ಪ್ರಶ್ನೆ ಕೇಳಿದ್ದೆ. 2019-20ರಲ್ಲಿ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿತ್ತು.
ಬೀದರ್ ಉಪಚುನಾವಣೆ ಸಂದರ್ಭದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರು ಮರಾಠಾ ಸಮಾಜ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದರು. ಅದೇ ರೀತಿ ಈಗಿನ ಸಿಎಂ ಬೊಮ್ಮಾಯಿ ಅವರು ಫೆಬ್ರುವರಿಯಲ್ಲಿ ಮರಾಠಾ ಸಮಾಜ ಅಭಿವೃದ್ಧಿ ನಿಗಮ ಉದ್ಘಾಟನೆ ಮಾಡಿ, 50-100 ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಈವರೆಗೂ ಒಬ್ಬ ವಿದ್ಯಾರ್ಥಿಗೂ ಲಾಭ ಆಗಿಲ್ಲ. ಒಬ್ಬ ರೈತನ ಮಗನಿಗೂ ಲಾಭ ಆಗಿಲ್ಲ. ಇನ್ನು ಅರ್ಜಿಯನ್ನೆ ಕರೆಯುತ್ತಿದ್ದಾರೆ ಎಂದು ಸಚಿವರು ಉತ್ತರ ಕೊಟ್ಟಿದ್ದಾರೆ. ಇದರಿಂದ ನಾವು ಜನರಿಗೆ ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ 2021-22ರ ಸಾಲಿನ ಡಿಸೆಂಬರ್‍ನಲ್ಲಿ ಅಧಿಕೃತವಾಗಿ ಮರಾಠ ಅಭಿವೃದ್ಧಿ ನಿಗಮ ರಚನೆಯಾಗಿದೆ. ಇತ್ತಿಚಿಗೆ ಇದರ ಅಧ್ಯಕ್ಷರಾಗಿ ಎಂ.ಜಿ.ಮೂಳೆ ಅವರು ನೇಮಕ ಆಗಿದ್ದಾರೆ. ಡಿಸೆಂಬರ್‍ನಲ್ಲಿ ರಚನೆ ಆಗಿದ್ದರಿಂದ ಅಧಿಕೃತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ವಿಳಂಬವಾಗಿದೆ.