ಕಾಗವಾಡ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಮನೆಗಳು ಬಿದ್ದಲ್ಲಿ ಮತ್ತು ಇನ್ನಿತರೆ ಯಾವುದೇ ಜೀವಹಾನಿ, ಅನಾಹುತಗಳು ಸಂಭವಿಸಿದಲ್ಲಿ 24 ಗಂಟೆ ಒಳಗಾಗಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ನೋಡಲ್ ಅಧಿಕಾರಿ ಎಲ್.ವೈ.
ರೂಡಗಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅವರ ಆದೇಶದಂತೆ ಈ ಸಭೆ ಕರೆಯಲಾಗಿದೆ. ನೆರೆ ಹಾವಳಿ ಹಾಗೂ ಅತಿವೃಷ್ಠಿಯಿಂದ ನಿಮ್ಮ ಕ್ಷೇತ್ರಗಳ ವ್ಯಾಪ್ತಿಗಳಲ್ಲಿ ಜರುಗುವ ಘಟನೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಯಾವೊಬ್ಬ ಅಧಿಕಾರಿಯೂ ಮೇಲಧಿಕಾರಿಗಳ ಆದೇಶ ಪಡೆಯದೇ ಸ್ಥಳ ಬಿಟ್ಟು ತೆರಳುವಂತಿಲ್ಲ. ರಜೆ ತೆಗೆದುಕೊಳ್ಳುವಂತಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ರಾಜೇಶ್ ಬುರ್ಲಿ ಮಾತನಾಡಿ, ಎಲ್ಲ ಅಧಿಕಾರಿಗಳ ಸಹಕಾರದಿಂದ ತಾಲ್ಲೂಕಿನಲ್ಲಿ ಆಗುವ ವಿಪತ್ತುಗಳನ್ನು ಎದುರಿಸಲು ನಾವೆಲ್ಲರೂ ಸಜ್ಜಾಗಿರೋಣ. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗ, ಪುಷ್ಪಲತಾ ಸುಣ್ಣದಕಲ್, ಕೆ.ಟಿ.ಬಿರಾದಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವೀಂದ್ರ ಸನಗೌಡ, ಮಹಾಂತೇಶ ಕವಲಾಪೂರ, ಉಗಾರ ಪುರಸಭೆ ಮುಖ್ಯಾಧಿಕಾರಿ ಸದಾಶಿವ ಬಬಲಾದಿ, ನೀರಾವರಿ ಇಲಾಖೆ ಎಂಜಿನಿಯರ್ ಕೆ.ರವಿ, ಪ್ರವೀಣ ಹುಣಸಿಕಟ್ಟಿ, ಮಲ್ಲಿಕಾರ್ಜುನ ಮಗದುಮ್, ಆರ್.ಪಿ.ಅವತಾಡೆ, ಎಂ.ಎಸ್. ಹುಂಡೇಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು