ಗೋಕಾಕ (ಬೆಳಗಾವಿ ಜಿಲ್ಲೆ): ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ ನದಿಗಳ ನೀರು ಉಕ್ಕೇರಿದ ಪರಿಣಾಮ, ಗೋಕಾಕ ನಗರದ ಕೆಲವು ರಸ್ತೆಗಳಿಗೆ ನೀರು ನುಗ್ಗಿದೆ. 200ಕ್ಕೂ ಹೆಚ್ಚು ಮನೆಗಳ ಮುಂದೆ ಎರಡು ಅಡಿಯಷ್ಟು ನೀರು ಸಂಗ್ರಹಗೊಂಡಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಎರಡು ದಿನಗಳಿಂದ ಘಟಪ್ರಭಾ ನದಿಗಳ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ರಾಜಾ ಲಖಮಗೌಡ ಜಲಾಶಯ (ಹಿಡಕಲ್) ದಿಂದ ಘಟಪ್ರಭಾ ನದಿಗೆ 28 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನೀರು ಹರಿದುಬಂದು ಹಳೆಯ ಗೋಕಾಕ ನಗರ ಸೇರಿಕೊಂಡಿದೆ. ಹೊರಹರಿವು ಹೆಚ್ಚಿಸಿದರೆ ಪ್ರವಾಹವೂ ಹೆಚ್ಚಾಗಲಿದೆ. ಜತ್ತ- ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಯಾವುದೇ ಕ್ಷಣದಲ್ಲಿ ಮುಳುಗುವ ಭೀತಿ ಎದುರಾಗಿದೆ. ತಾಲ್ಲೂಕು ಆಡಳಿತದಿಂದ ಪರಿಶೀಲನೆ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆಯ ಬಹುಪಾಲು ಕಡೆ ಸೋಮವಾರ ಕೂಡ ಧಾರಾಕಾರ ಮಳೆ ಮುಂದುವರಿದಿದೆ. ಚಿಕ್ಕೋಡಿ, ರಾಮದುರ್ಗ, ನಿಪ್ಪಾಣಿ ಹಾಗೂ ಖಾನಾಪುರ ತಾಲ್ಲೂಕುಗಳ ಒಟ್ಟು 20ಕ್ಕೂ ಹೆಚ್ಚು ಸೇತುವೆಗಳ ಮೇಲೆ ನದಿ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ.
ರೇಣುಕಾಸಾಗರ ಜಲಾಶಯ (ನವಿಲುತೀರ್ಥ)ದಿಂದ ಕೂಡ ಮಲಪ್ರಭಾ ನದಿಗೆ 12.5 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಮುನವಳ್ಳಿ ಪಟ್ಟಣದೊಳಗಿನ ಹಳೆ ಸೇತುವೆ ಮುಳುಗಡೆಯಾಗಿದೆ. ರಾಮದುರ್ಗ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಜನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.