ತಿರುವನಂತಪುರ: ಎಲೆಕ್ಟ್ರಿಕ್ ವಾಹನ ಒಂದಕ್ಕೆ ವಾಯು ಮಾಲಿನ್ಯ ಪ್ರಮಾಣಪತ್ರ (ಪಿಯುಸಿ) ಕೊಟ್ಟಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಡ ಹಾಕಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ.
ಅಸಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಅಗತ್ಯ ಇಲ್ಲ.
ಆದರೆ, ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ಯುವಕನೊಬ್ಬ ‘ಏಥರ್’ ಕಂಪನಿಯ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ₹250 ದಂಡ ವಿಧಿಸಿ ರಶೀದಿ ಕೊಟ್ಟಾಗ ಯುವಕ ಹೌಹಾರಿದ್ದಾನೆ.
ಪರಿಶೀಲನೆ ವೇಳೆ ಪಿಯುಸಿ ಪ್ರಮಾಣಪತ್ರ ನೀಡಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಢ ವಿಧಿಸಿದ್ದಾರೆ. ಯುವಕನಿಗೂ ಕೂಡ ಮನೆಗೆ ಬಂದು ರಶೀದಿ ನೋಡಿದಾಗ ಪೊಲೀಸರ ಪ್ರಮಾದ ಗೊತ್ತಾಗಿದೆ.
ಯುವಕ ಇದೇ ರಶೀದಿಯನ್ನು ಟ್ವಿಟರ್‌ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಟ್ಯಾಗ್ ಮಾಡಿ, ‘ಸ್ವಾಮಿ, ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ ಮಾಡಿರುವಿರಾ ಹೇಗೆ?’ ಎಂದು ಪ್ರಶ್ನಿಸಿದ್ದಾನೆ.
ಇನ್ನು ಈ ಪ್ರಮಾದ ಬೆಳಕಿಗೆ ಬಂದ ನಂತರ ಸ್ಪಷ್ಟನೆ ನೀಡಿರುವ ಮಣಪ್ಪುರಂ ಜಿಲ್ಲೆಯ ಪೊಲೀಸರು, ಇದು ಸಿಬ್ಬಂದಿ ಅಚಾತುರ್ಯದಿಂದ ಆಗಿರುವ ಘಟನೆ. ಅಸಲಿಗೆ ಯುವಕ ಡಿಎಲ್ ಪ್ರಸ್ತುತಪಡಿಸದಿದ್ದಕ್ಕೆ ದಂಡ ವಿಧಿಸಲಾಗಿತ್ತು. ದಂಡ ನೀಡುವಾಗ ಮಷಿನ್‌ನಲ್ಲಿ ಆದ ಎಡವಟ್ಟಿನಿಂದ ಹೀಗೆ ಆಗಿದೆ ಎಂದಿದ್ದಾರೆ.
ಇನ್ನು ಕೇರಳ ಟ್ರಾಫಿಕ್ ಪೊಲೀಸರ ಈ ಎಡವಟ್ಟನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
Laxmi News 24×7