ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವಕ್ಕೆ ತೆರೆ ಬಿದ್ದಿದ್ದು. ನಿರಂತರವಾಗಿ 25 ಗಂಟೆಗೂ ಹೆಚ್ಚು ಕಾಲ ಭವ್ಯ ಮೆರವಣಿಗೆ ಮೂಲಕ ಸಾರ್ವಜನಿಕ ಗಣೇಶ ಮಂಡಳಿಗಳ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನೆರವೇರಿಸಲಾಯಿತು. ಈ ವೇಳೆ ಲಕ್ಷಾಂತರ ಜನರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.
ಹೌದು ಬೆಳಗಾವಿಯ ಗಣೇಶೋತ್ಸವಕ್ಕೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆಯಿದೆ. ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಇಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಎರಡು ವರ್ಷದ ಬಳಿಕ ಈ ವರ್ಷ ಹೆಚ್ಚಿನ ಸಂಭ್ರಮ, ಸಡಗರ ಗಣೇಶೋತ್ಸವದಲ್ಲಿ ಕಂಡು ಬಂದಿತು.
10 ದಿನಗಳಿಂದ ಶ್ರದ್ಧಾ ಭಕ್ತಿಯಿಂದ ವಿಘ್ನವಿನಾಯಕನಿಗೆ ಪೂಜೆ ಸಲ್ಲಿಸಿದ್ದ ಸಾರ್ವಜನಿಕ ಗಣೇಶ ಮಂಡಳಿಗಳು ಭವ್ಯ ಮೆರವಣಿಗೆ ಮೂಲಕ ಗಣೇಶನಿಗೆ ವಿದಾಯ ಹೇಳಿದರು. ಶುಕ್ರವಾರ ಸಾಯಂಕಾಲ 5 ಗಂಟೆಗೆ ಹುತಾತ್ಮ ಚೌಕ್‍ನಲ್ಲಿ ಲೋಕಮಾನ್ಯ ಟಿಳಕ ಗಣೇಶ ಮಹಾಮಂಡಳದಿಂದ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶನಿಗೆ ಸಂಸದೆ ಮಂಗಲ ಅಂಗಡಿ, ನಗರ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಸೇರಿದಂತೆ ಇನ್ನಿತರ ಗಣ್ಯರು ಪೂಜೆ ಸಲ್ಲಿಸಿದರು.
ಇದೇ ವೇಳೆ ಡೋಲು ಬಾರಿ, ಟೆಂಗಿನಕಾಯಿ ಒಡೆಯುವ ಮೂಲಕ ಗಣೇಶೋತ್ಸವ ವಿಸರ್ಜನೆಯ ಅದ್ಧೂರಿ ಮೆರವಣಿಗೆಗೆ ವಿದ್ಯುಕ್ತವಾಗಿ ಗಣ್ಯರು ಚಾಲನೆ ನೀಡಿದರು.
ಒಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಸೇರಿ ಇನ್ನಿತರ ಇಲಾಖೆಗಳ ಅವಿರತ ಶ್ರಮದಿಂದ ಬೆಳಗಾವಿಯಲ್ಲಿ ಗಣೇಶೋತ್ಸವ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಯಶಸ್ವಿಯಾಗಿ ನೆರವೇರಿತು.