ಹುಬ್ಬಳ್ಳಿ: ”ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ” ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯದಲ್ಲಿ ಪ್ರವಾಹದಿಂದ 7 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಜನಸ್ಪಂದನ ಹೆಸರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದು ಸರಕಾರದ ವಿರುದ್ಧ ಹರಿಹಾಯ್ದರು.
”ರಾಜ್ಯದಲ್ಲಿ ಪ್ರವಾಹವುಂಟಾಗಿ ಜನ ಸಮಸ್ಯೆ ಪಡುತ್ತಿದ್ದರೂ ಯಾವ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ. ಜನಸಾಮಾನ್ಯರ ಸಮಸ್ಯೆ ಬಗ್ಗೆ ಇವರಿಗೆ ಸ್ವಲ್ಪವಾದರೂ ಕಾಳಜಿ ಇಲ್ಲ. ಹಣ ಹೊಡೆಯುವುದೆ ಇವರ ಅಜೆಂಡಾ ಆಗಿದೆ” ಎಂದು ಕಿಡಿ ಕಾರಿದರು.
”ದಾವಣಗೆರೆಯಲ್ಲಿ ನಡೆದ ನನ್ನ ಜನ್ಮೋತ್ಸವದ ಪ್ರತ್ಯುತ್ತರವಾಗಿ ಜನ ಸ್ಪಂದನ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಜನ ಸ್ವಯಂಪ್ರೇರಿತರಾಗಿ ಆಗಮಿಸಿದ್ದರು. ಆದರೆ ಇಲ್ಲಿ ಭ್ರಷ್ಟಾಚಾರದ ಹಣದಲ್ಲಿ ಜನರನ್ನು ಕರೆದುಕೊಂಡು ಬಂದು ಸಮಾರಂಭ ಮಾಡುತ್ತಿದ್ದಾರೆ” ಆಕ್ರೋಶ ವ್ಯಕ್ತಪಡಿಸಿದರು.”ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಹಾಗೂ ಬಿಜೆಪಿಯ ಹಿರಿಯ ಮುತ್ಸದ್ಧಿಯಾಗಿದ್ದರು. ಅವರ ಬಗ್ಗೆ ಒಂದು ಕಡೆ ಶೋಕಚಾರಣೆ ಅನ್ನುತ್ತಾರೆ. ಇನ್ನೊಂದು ಕಡೆ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದರು.