ಹಾಸನ: ಭ್ರಷ್ಟಾಚಾರ ಆರೋಪಕ್ಕೆ ಸಾಕ್ಷ್ಯ ನೀಡಲಿ ಎಂಬ ಬಿಜೆಪಿ ನಾಯಕರ(BJP Leaders) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಲಂಚ ಕೊಟ್ಟಿದ್ದಕ್ಕೆ ಯಾರಾದರೂ ರಶೀದಿ ಕೊಡ್ತಾರೇನ್ರಿ? ಎಂದು ಟಾಂಗ್ ಕೊಟ್ಟಿದ್ದಾರೆ.
ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡಲಿ ಸತ್ಯ ಗೊತ್ತಾಗುತ್ತೆ. ನ್ಯಾಯಾಂಗ ತನಿಖೆಯಾದ್ರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಆರೋಪ ಸಾಬೀತಾಗದಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದಿದ್ದಾರೆ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಬಗ್ಗೆ ಭಯ ಯಾಕೆ? ನೀವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ಹೆದರುವುದು ಯಾಕೆ? ಕೆಂಪಣ್ಣ ಕಾಂಗ್ರೆಸ್ಸೋ ಬಿಜೆಪಿಯೋ ನನಗೆ ಗೊತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ನಲ್ಲಿ ಇದ್ದರಾ? ಗುತ್ತಿಗೆದಾರರ ಸಂಘದಲ್ಲಿ ಬಿಜೆಪಿ ಸೇರಿ ಎಲ್ಲಾ ಪಕ್ಷದವರು ಇದ್ದಾರೆ. ಕೆಂಪಣ್ಣ ನನಗೆ ಗೊತ್ತಿರುವ ಹಾಗೆ ಯಾವ ಪಕ್ಷದಲ್ಲೂ ಇಲ್ಲ. ಪಕ್ಷಾತೀತವಾಗಿ ಗುತ್ತಿಗೆದಾರ ಸಂಘದ ಕೆಂಪಣ್ಣ ಭೇಟಿಯಾಗಿದ್ದಾರೆ. ಕಮಿಷನ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲು ನನಗೆ ಹೇಳಿದ್ದಾರೆ. ಸದನಲ್ಲಿ ಕಮಿಷನ್ ಆರೋಪವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದೇನೆ ಎಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದರು.