ಬೆಳಗಾವಿ: ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದು, ಶಿಕ್ಷಕ ಮತ್ತು ಉಪನ್ಯಾಸಕ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದು, ಪ್ರಸ್ತುತ 425 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. 400 ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದಾರೆ.
ಸುಮಾರು 19 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ, ಐದಕ್ಕಿಂತಲೂ ಹೆಚ್ಚು ಜನ ಶಿಕ್ಷಕರನ್ನು ಹೊಂದಿದ ಹಲವು ಕುಟುಂಬಗಳಿವೆ. ಬಬನ್ ಕಾನ್ಶಿಡೆ ಅವರ ಕುಟುಂಬವೊಂದರಲ್ಲೇ 12 ಮಂದಿ ಶಿಕ್ಷಕರಿದ್ದಾರೆ. ಈ ಪೈಕಿ 6 ಮಂದಿ ಸೇವಾ ನಿವೃತ್ತಿ ಹೊಂದಿದ್ದರೆ, ಉಳಿದ 6 ಜನ ಸೇವೆಯಲ್ಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ, ಉಪನ್ಯಾಸಕರಾಗಿದ್ದ ಅರುಣ ಸುಳಗೇಕರ್ ಅವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ.
ಶಿಕ್ಷಣಕ್ಕೆ ಹೆಚ್ಚಿನ ಒತ್ತು: ‘ನಮ್ಮೂರಿನಲ್ಲಿ ಕನ್ನಡ, ಮರಾಠಿ, ಉರ್ದು ಮಾಧ್ಯಮ ಸೇರಿ 5 ಸರ್ಕಾರಿ ಪ್ರಾಥಮಿಕ ಶಾಲೆಗಳು, ಒಂದು ಖಾಸಗಿ ಪ್ರಾಥಮಿಕ ಶಾಲೆ ಮತ್ತು ನಾಲ್ಕು ಖಾಸಗಿ ಪ್ರೌಢಶಾಲೆಗಳಿವೆ. ನಮ್ಮ ಹಿರಿಯರೂ ಹಿಂದಿನಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿದ್ದಾರೆ. ಹಾಗಾಗಿ ಹೆಚ್ಚಿನವರು ಶಿಕ್ಷಕರಾಗಿದ್ದಾರೆ’ ಎಂದು ಯಳ್ಳೂರಿನ ಖಾಸಗಿ ಪ್ರೌಢಶಾಲೆಯೊಂದರಲ್ಲಿ ಮುಖ್ಯಶಿಕ್ಷಕರಾಗಿರುವ ಬಬನ್ ಕಾನ್ಶಿಡೆ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕೆಲವರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದಾರೆ. ಸರ್ಕಾರಿ ಸೇವೆಗಿಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೇ ಹೆಚ್ಚಿನವರಿದ್ದಾರೆ. 600ಕ್ಕೂ ಅಧಿಕ ಸೈನಿಕರೂ ಇದ್ದಾರೆ ‘ ಎಂದೂ ಹೇಳಿದರು.
ಬಬನ್ ಅವರು ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲೂ ಇಂಥದ್ದೇ ವೈಶಿಷ್ಟ್ಯ ಕಾಣಬಹುದು. ‘ಏಳು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 50ಕ್ಕೂ ಅಧಿಕ ಶಿಕ್ಷಕರು ಹಾಗೂ ಅಷ್ಟೇ ಸಂಖ್ಯೆಯ ಸೈನಿಕರೂ ಇದ್ದಾರೆ. ಕ್ರಿಯಾತ್ಮಕ ಚಟುವಟಿಕೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹಲವರು ಮಿಂಚುತ್ತಿದ್ದಾರೆ. ಊರಿನ ಶಾಲೆಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ’ ಎಂದು ಶಿಕ್ಷಕರಾದ ವಿನೋದ ಪಾಟೀಲ, ರಮೇಶ ಪೂಜಾರ, ಅಜ್ಜಪ್ಪ ಅಂಗಡಿ, ಗಜಾನನ ಸೊಗಲಣ್ಣವರ ತಿಳಿಸಿದರು.