ಅಣ್ಣಾವ್ರ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಅದೆಷ್ಟೋ ಮಂದಿ ಕೃಷಿ ಕೆಲಸಗಳಿಗೆ ತೊಡಗಿಕೊಂಡರು. ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಿ ಬದಲಾದವರು ಅದೆಷ್ಟೊ. ಆದರೆ ಈಗಿನ ಜಮಾನಾದ ಸಿನಿಮಾಗಳನ್ನು ನೋಡಿ ಏನೂ ಕಲಿಯದಿದ್ದರೆ ಸಾಕು ಎಂದುಕೊಳ್ಳುವ ರೀತಿ ಇರುತ್ತವೆ ಸಿನಿಮಾದ ಸಂದೇಶಗಳು.
ಈಗಿನ ಜಮಾನಾದ ಸಿನಿಮಾಗಳನ್ನು ನೋಡಿ ಕೊಲೆ ಮಾಡಿದ, ಸಿನಿಮಾ ಶೈಲಿಯಲ್ಲಿಯೇ ದರೋಡಿ ಮಾಡಿದ, ಸಿನಿಮಾದ ನಾಯಕನ್ನು ಆದರ್ಶನವಾಗಿ ತೆಗೆದುಕೊಂಡು ರೌಡಿಯಾದ ಉದಾಹರಣೆಗಳು ಸಾಕಷ್ಟಿವೆ. ಈ ಉದಾಹರಣೆಗಳ ಸಾಲಿಗೆ ಹೊಸ ಸೇರ್ಪಡೆ ‘ಕೆಜಿಎಫ್’ ಸಿನಿಮಾದ ‘ರಾಕಿಭಾಯ್’ನಿಂದ ಸ್ಪೂರ್ತಿ ಪಡೆದ ಅಪರಾಧಿಯದ್ದು.
ಮಧ್ಯ ಪ್ರದೇಶದ ಯುವಕನೊಬ್ಬ ‘ಕೆಜಿಎಫ್’ ಸಿನಿಮಾ ವೀಕ್ಷಿಸಿ ಸಿನಿಮಾದ ನಾಯಕ ರಾಕಿಭಾಯ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಐದು ಮಂದಿ ಕೊಲೆ ಮಾಡಿದ್ದಾನೆ. ತಾನು ರಾಕಿಭಾಯ್ ಅನ್ನು ಸ್ಪೂರ್ತಿಯನ್ನಾಗಿ ತೆಗೆದುಕೊಂಡು ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ತಾನೇ ಒಪ್ಪಿಕೊಂಡಿದ್ದಾನೆ.
19 ವರ್ಷದ ಶಿವ ಪ್ರಸಾದ್, ತಾನು ರಾಕಿಭಾಯ್‌ನಂತೆ ದೊಡ್ಡ ಹೆಸರು ಮಾಡಬೇಕು ಎಂಬ ಆಸೆಯಲ್ಲಿ ಐದು ಜನ ಅಮಾಯಕರ ಜೀವವನ್ನೇ ತೆಗೆದಿದ್ದಾನೆ.