ಬೆಂಗಳೂರು: “ನಿಮ್ಮ ಇಂದಿನ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ?
ಅಥವಾ ವಿನಾಸ ದರ್ಶನಕ್ಕೊʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
#AnswerMadiModi ಎಂಬ ಹ್ಯಾಷ್ ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, “ನಮ್ಮೆಲ್ಲ ಪ್ರಶ್ನೆಗಳಿಗೆ ನಿಮ್ಮ ಇಂದಿನ ಭಾಷಣದಲ್ಲಿ ಉತ್ತರ ಕೊಡಿʼ ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರ ಪ್ರಶ್ನೆಗಳು ಹೀಗಿವೆ…
ದಕ್ಷಿಣ ಕನ್ನಡದ ಉದ್ಯಮ ಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ಇದು ವಿಕಾಸವೋ? ವಿನಾಶವೋ?
ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರು- ಹಾಜಿ ಅಬ್ದುಲ್ಲಾ (1906), ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ, ವಾಮನ್ ಕುಡ್ವಾ (1925). ವಿಜಯಾ ಬ್ಯಾಂಕ್ ಸ್ಥಾಪಕರು- ಎ.ಬಿ.ಶೆಟ್ಟಿ (1931). ಪ್ರಧಾನಿಯವರೇ, ನಿಮ್ಮ ನಡೆ ಈ ಅಮರವೀರರಿಗೆ ಬಗೆದ ದ್ರೋಹವಲ್ಲವೇ? ಇದು ವಿಕಾಸವೋ? ವಿನಾಶವೋ?
ಬಜ್ಪೆ ವಿಮಾನ ನಿಲ್ದಾಣ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೊಡುಗೆ. ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ಈ ವಿಮಾನ ನಿಲ್ದಾಣವನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಅರ್ಪಿಸಿದ್ದು (20-10-2020) ಪ್ರಧಾನಿ ನರೇಂದ್ರ ಮೋದಿ. ಇದು ವಿಕಾಸವೋ? ವಿನಾಶವೋ?