Breaking News

ಹಬ್ಬ ಆಚರಿಸಲು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ: ಮುತಾಲಿಕ್

Spread the love

ಹುಬ್ಬಳ್ಳಿ: ‘ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ನಾವಿದ್ದರೂ, ನಮ್ಮದೇ ನೆಲದಲ್ಲಿ ಹಬ್ಬ ಆಚರಿಸಲು ಕೋರ್ಟ್ ಕಟ್ಟೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.

 

ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಇದೀಗ ಹಿಂದೂಗಳೆಲ್ಲರೂ ಒಂದಾಗಿದ್ದಾರೆ. ರಾಣಿ ಚನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವವೇ ಇದಕ್ಕೆ ಸಾಕ್ಷಿ. ಪ್ರಥಮ ಬಾರಿಗೆ ಇಲ್ಲಿ ಮೂರು ದಿನ ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ’ ಎಂದರು.

‘ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅವಕಾಶ ನೀಡದಂತೆ ವಿರೋಧಿಗಳು ಅಡ್ಡಿಪಡಿಸಲು ಸಾಕಷ್ಟು ತಂತ್ರ ರೂಪಿಸಿದರು. ಆದರೂ ಗಣೇಶ ನಮಗೆ ಬಲ ಕೊಟ್ಟು ಯಾವ ಶಕ್ತಿಯ ಆಟವೂ ನಡೆಯದಂತೆ ಮಾಡಿದ. ಅವನ ಆಶೀರ್ವಾದ ನಮಗೆ ದೊರಕಿದೆ’ ಎಂದು ಹೇಳಿದರು.

‘ಮೂರು ದಿನದ ಗಣೇಶೋತ್ಸವವನ್ನು ಈ ವರ್ಷ ಹಿಂದೂ ಸಂಘಟನೆಗಳು, ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ ಉತ್ಸವ ಆಚರಿಸಲಾಗಿದೆ. ಮುಂದೆ ಇನ್ನೂ ಹೆಚ್ಚು ದಿನ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡೋಣ. ಲಕ್ಷಾಂತರ ಭಕ್ತರ ಹಾಗೂ ಅವರ ಭಾವನೆಗಳಿಗೆ ಸರ್ಕಾರ, ಕೋರ್ಟ್, ಮೇಯರ್ ಸ್ಪಂದಿಸಿ, ಉತ್ಸವಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲ ಹಿಂದೂ ಸಂಘಟನೆಗಳಿಂದ ಅವರಿಗೆ ಅಭಿನಂದನೆಗಳು’ ಎಂದರು.

‘ಕಾನೂನು ಚೌಕಟ್ಟಿನಲ್ಲಿ ಕ್ರಮ’

ಚಿತ್ರದುರ್ಗದ ಮುರುಘಾ ಮಠದ ಶರಣರ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ವಾಮೀಜಿ ಕಡೆಯವರು ಇದೊಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಸಂತ್ರಸ್ತರ ಕಡೆಯವರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯಿಂದ ಸತ್ಯ ಹೊರಬರಲಿದೆ’ ಎಂದರು.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ