ಬೆಳಗಾವಿ: ಕುರಿ ಮತ್ತು ಮೇಕೆ ಮಾರಾಟ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸಲು ಹಾಗೂ ಕುರಿಗಾಹಿ ರೈತರಿಗೆ ನೇರವಾಗಿ ಯೋಗ್ಯ ದರ ದೊರಕಿಸಿಕೊಡುವಲ್ಲಿ ಡಿಜಿಟಲ್ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ಗವ್ಹಾರ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಎನ್.ಸಿ.ಡಿ.ಇ.ಎಕ್ಸ್ ಇ-ಮಾರ್ಕೆಟ್ಸ್ ಲಿ., ಸಹಯೋಗದಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳು, ರೈತ ಉತ್ಪಾದಕರ ಸಂಸ್ಥೆ , ಕುರಿ-ಮೇಕೆ ಮಾರಾಟಗಾರರು ಹಾಗೂ ಖರೀದಿದಾರರಿಗೆ ಸೋಮವಾರ ನಗರದ ಕರ್ನಾಟಕ ಪಶು ವೈದ್ಯಕೀಯ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಕುರಿ ಮತ್ತು ಮೇಕೆಗಳ ಡಿಜಿಟಲ್ ಮಾರಾಟ ವ್ಯವಸ್ಥೆಯ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಕುರಿ ಹಾಗೂ ಮೇಕೆಗಳ ಪಾರದರ್ಶಕ ಮಾರಾಟ ಮತ್ತು ಖರೀದಿ ವ್ಯವಸ್ಥೆಗಾಗಿ ಡಿಜಿಟಲ್ ಮಾರಾಟ ಪ್ರಕ್ರಿಯೆ ಶುರುವಾಗಿದೆ. ರಾಜ್ಯದ ಎಲ್ಲ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರು ಇದರಲ್ಲಿ ನೇರವಾಗಿ ಭಾಗವಹಿಸಬಹುದು. ಮಾರುಟ್ಟೆಯ ನಿಗದಿತ ದರದ ಹೊರತಾಗಿ ಸಾಕಾಣಿಕೆದಾರರು ಬಿಡ್ ಮೂಲಕವೂ ತಮ್ಮ ವ್ಯಾಪಾರವನ್ನು ಕೈಗೊಳ್ಳಬಹುದು ಎಂದು ಅವರು ಹೇಳಿದರು.