ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರಿಯಲಿದ್ದು, ಗಣೇಶ ಹಬ್ಬದ ದಿನ(ಆ.31) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿರುತ್ತಿರುವ ಪರಿಣಾಮ ನದಿಗಳು ಮೈದುಂಬಿ ಹರಿಯುತ್ತಿವೆ.
ಇದು ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಸೆ.1ರ ವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆ.31 ಮತ್ತು ಸೆ.1ರಂದು ಯೆಲ್ಲೋ ಅಲರ್ಟ್ ನೀಡಿದೆ.
ಬೆಂಗಳೂರು-ಮೈಸೂರು ಸಂಚಾರಕ್ಕೆ ಬದಲಿ ಮಾರ್ಗ
ಕಳೆದ ಎರಡು ದಿನಗಳಿಂದ ರಾಮನಗರ ಜಿಲ್ಲೆಯಾದ್ಯಂತ ಸುರಿದ ಮಳೆ ಜನತೆಯನ್ನು ಹೈರಾಣಾಗಿಸಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಂತೂ ಕೆರೆಯಂತಾಗಿ ರೂಪುಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಶನಿವಾರದಿಂದ ಮೂರು ದಿನಗಳವರೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಮಾರ್ಗ ಬದಲಿಸಿಕೊಂಡು ಹೋಗುವಂತೆ ಜಿಲ್ಲಾ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣ ಮಾಡುವವರು ಕನಕಪುರ-ಹಾರೋಹಳ್ಳಿ ಮಾರ್ಗವಾಗಿ ಹಾಗೂ ಮಾಗಡಿ-ಮಂಚಿನಬೆಲೆ ಮಾರ್ಗ ಬಳಸುವಂತೆ ಬದಲಿ ಮಾರ್ಗ ಸೂಚಿಸಲಾಗಿದೆ.
ವಿಶೇಷವಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಇದು ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದರ ನಡುವೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮೇಲ್ಸೇತುವೆ ಮುಚ್ಚಿಹೋಗುವಷ್ಟರ ಮಟ್ಟಿಗೆ ನೀರು ನಿಂತಿದೆ.