ಕೊಪ್ಪಳ: ಪೋಸ್ ಕೊಡುವ ಭರದಲ್ಲಿ ಸಂಸದರ ಪುತ್ರ ರೈತರಿಗೆ ಅವಮಾನಿಸಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ನೇಗಿಲು ಹಿಡಿದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುವಾಗ ಸಾಮಾನ್ಯವಾಗಿ ರೈತರು ಚಪ್ಪಲಿ ಧರಿಸುವುದಿಲ್ಲ. ಈ ಮೂಲಕ ನೇಗಿಲನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಾರೆ. ಆದರೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ರೈತರ ಪರ ಕಾಳಜಿಯಂತೆ ಪೋಸ್ ಕೊಡುವ ಭರದಲ್ಲಿ ಚಪ್ಪಲಿ ಹಾಕಿಕೊಂಡೇ ನೇಗಿಲು ಹೊಡೆದು ರೈತರಿಗೆ ಅವಮಾನಿಸಿದ್ದಾರೆ.
ಈ ವಿಡಿಯೋವನ್ನು ಸ್ವತಃ ಅಮರೇಶ್ ಕರಡಿ ಅಭಿಮಾನಿಗಳೇ ಹರಿಬಿಟ್ಟಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕಂಡ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೂಜ್ಯನೀಯ ಭಾವನೆಯಿಂದ ನೋಡುವ ನೇಗಿಲನ್ನು ರೈತರು ಚಪ್ಪಲಿ ಹಾಕಿಕೊಂಡು ಉಳುಮೆ ಮಾಡುವುದಿಲ್ಲ. ಆದರೆ ಸಂಸದರ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ಪೋಸ್ ನೀಡಿ ರೈತರಿಗೆ ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.