ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದ ಸರ್ಕಾರದ ಕಾರ್ಯವೈಖರಿ ಖಂಡಿಸಿ ಆ.17 ರಂದು ಮಹಾಲಿಂಗಪುರ ಬಂದ್‌ಗೆ ಕರೆ ನೀಡಲಾಗಿದ್ದು, ಸಾಮೂಹಿಕ ನಾಯಕತ್ವದಡಿ ತಾಲ್ಲೂಕು ಕೇಂದ್ರಕ್ಕೆ ಹೋರಾಟ ನಡೆಸಲಾಗುವುದು ಎಂದು ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.
ಹೋರಾಟದ ವೇದಿಕೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15 ರೊಳಗೆ ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದರೆ ಆ.17ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಈಗಾಗಲೇ ತಿಳಿಸಲಾಗಿತ್ತು. ಇನ್ನುವರೆಗೂ ಸರ್ಕಾರ ಮಹಾಲಿಂಗಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿಲ್ಲ. ಹೀಗಾಗಿ ಆ.17ರಂದು ಮಹಾಲಿಂಗಪುರ ಬಂದ್ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
ಆ.17ರಂದು ಮುಂಜಾನೆ 9 ಗಂಟೆಗೆ ಬಸವೇಶ್ವರ ವೃತ್ತದಿಂದ ನಡುಚೌಕಿ, ಜವಳಿ ಬಜಾರ್, ಗಾಂಧಿ ವೃತ್ತದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಚನ್ನಮ್ಮ ವೃತ್ತದಲ್ಲಿ ಸಮಾಪ್ತಿಗೊಳಿಸಿ ಹೋರಾಟ ವೇದಿಕೆಯಲ್ಲಿ ಸಭೆ ನಡೆಸಲಾಗುವುದು.
ಜಿಲ್ಲಾಧಿಕಾರಿಗೆ ಮನವಿ : ಸಭೆಯ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗಳು ಹೋರಾಟ ವೇದಿಕೆಗೆ ಆಗಮಿಸಿ, 125 ದಿನಗಳ ಕಾಲ ನಡೆದ ತಾಲೂಕು ಹೋರಾಟದ ಕುರಿತು ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಬಹಿರಂಗಪಡಿಸಬೇಕು.ಒಂದು ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರದಿದ್ದರೆ ಅವರು ಬರುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಮಹಾಲಿಂಗಪುರ ಬಂದ್ ಹಿನ್ನೆಲೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಪಟ್ಟಣದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ, ಪಕ್ಷಾತೀತವಾಗಿ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
Laxmi News 24×7