ಬೆಂಗಳೂರು: ಹಾಸನ ಮತ್ತು ಬೆಂಗಳೂರು ನಗರಗಳಲ್ಲಿ 2017-18ರ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಸೇರಿದಂತೆ ಗಾಯಾಳು ಸಂತ್ರಸ್ತರಿಗೆ ಒಟ್ಟು ₹ 1.28 ಕೋಟಿ ಮೊತ್ತದ ಪರಿಹಾರ ಪಾವತಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿಗೆ (ಬೆಸ್ಕಾಂ) ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಸಲ್ಲಿಸಲಾಗಿದ್ದ ಮೂರು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಎರಡು ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಮತ್ತು ಓವರ್ ಹೆಡ್ ವಿದ್ಯುತ್ ಲೇನ್‌ಗಳಿಂದ ಅವಘಡ ಸಂಭವಿಸಿದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಕಂಪನಿಗಳು ಮುಖ್ಯ ಕಚೇರಿಯಿಂದ ವರದಿಗೆ ಕಾಯಬಾರದು’ ಎಂದು ಆದೇಶಿಸಿದೆ.
ಎನ್.ಸುಬ್ರಹ್ಮಣ್ಯ: ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿ ಎಸ್ಟೇಟ್‌ನಲ್ಲಿ ಕಾಳು ಮೆಣಸು ಒಕ್ಕಣೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಕೃಷಿ ಕಾರ್ಮಿಕ ಎನ್. ಸುಬ್ರಹ್ಮಣ್ಯ (36) ಸಾವನ್ನಪ್ಪಿದ್ದ ಪ್ರಕರಣದಲ್ಲಿ ಕೆಪಿಟಿಸಿಎಲ್ ₹ 5 ಲಕ್ಷ ಪರಿಹಾರ ನೀಡಿ 2017ರ ನವೆಂಬರ್ 9ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೃತರ ಪತ್ನಿ ರೇಖಾ, ‘₹ 68.74 ಲಕ್ಷ ಪರಿಹಾರ ನೀಡಲು ಆದೇಶಿಸಬೇಕು’ ಎಂದು ಕೋರಿದ್ದರು. ಈ ಪ್ರಕರಣದಲ್ಲಿ ₹ 25.52 ಲಕ್ಷ ಪರಿಹಾರ ನೀಡಲು ನ್ಯಾಯಪೀಠ ಆದೇಶಿಸಿದೆ.
ಕೆ.ಚಂದನಾ: ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕಿ ಕೆ.ಚಂದನಾ 2018ರ ಅಕ್ಟೋಬರ್ 1ರಂದು ತಲೆಯ ಮೇಲೆ ಕಬ್ಬಿಣದ ಕಂಬಿಗಳನ್ನು ಹೊತ್ತು ಮನೆಯ ಮೆಟ್ಟಿಲು ಹತ್ತುತ್ತಿದ್ದಳು. ಈ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ 11 ಕೆ.ವಿ.ಸಾಮರ್ಥ್ಯದ ವಿದ್ಯುತ್ ತಂತಿಗಳು ಕಂಬಿಗಳಿಗೆ ಸ್ಪರ್ಶಿಸಿದ್ದವು. ವಿದ್ಯುತ್ ಪ್ರವಹಿಸಿ ಚಂದನಾ ಶೇ 79ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಬೆಸ್ಕಾಂ ₹ 2.5 ಲಕ್ಷ ಪರಿಹಾರ ನೀಡಿತ್ತು. ಇದನ್ನು ಪ್ರಶ್ನಿಸಿ ₹ 90 ಲಕ್ಷ ಪರಿಹಾರ ಕೋರಿದ್ದ ಈ ಪ್ರಕರಣದಲ್ಲಿ ₹ 51.76 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ.