ಮಂಗಳೂರು, ಆಗಸ್ಟ್ 12: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡಿಗೆ ಇಂಜಿನಿಯರ್ ವಿದ್ಯಾರ್ಥಿ ಬಲಿಯಾದ ಘಟನೆ ನಗರದ ನಂತೂರು ಬಳಿಯ ಬಿಕರ್ಣಕಟ್ಟೆಯಲ್ಲಿ ನಡೆದಿದೆ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಿದ್ಯಾರ್ಥಿಯ ಸ್ನೇಹಿತ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ಜೊತೆಗೆ ಸಾಮಾಜಿಕ ಜಾಲಾತಾಣದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ರಸ್ತೆಯಲ್ಲಿರುವ ಗುಂಡಿಯಿಂದ ತನ್ನ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ರಸ್ತೆಯ ರಿಫ್ಲೆಕ್ಟರ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಆತೀಷ್ (20) ಎಂಬ ಯುವಕ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ.
ನಿಯಮ ಬಾಹಿರವಾಗಿ ಸುಂಕವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯಲ್ಲಿ ಬಿದ್ದ ಗುಂಡಿ ಮುಚ್ಚಿಸಲು ಉತ್ಸಾಹ ತೋರದಿರುವುದಕ್ಕೆ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗಸ್ಟ್ 5 ಶುಕ್ರವಾರ ಘಟನೆ ನಡೆದಿದ್ದು, ನಂತೂರು ಜಂಕ್ಷನ್ ನಿಂದ ಕೈಕಂಬ ಕಡೆಗೆ ಹೋಗುವವರಿದ್ದ ಆತೀಷ್ ಅವರ ದ್ವಿಚಕ್ರ ವಾಹನ ಬಿಕರ್ಣನಕಟ್ಟೆ ಬಳಿ ಗುಂಡಿ ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಆತೀಷ್ ವಾಹನದಿಂದ ಕೆಳಗೆ ಬಿದ್ದು, ವಿಭಜಕದಲ್ಲಿ ಹಾಕಲಾಗಿದ್ದ ರಿಫ್ಲೆಕ್ಟರ್ ರೇಲಿಂಗ್‌ಗೆ ಆತೀಷ್ ತಲೆ ಬಡಿದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಈ ಹಿಂದೆ ಹಲವು ಮಂದಿ ಗುಂಡಿಗೆ ಬಿದ್ದು,ಕೈ-ಕಾಲು ಮುರಿತವಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆತೀಷ್ ಸಾವನ್ನಪ್ಪಿ ಒಂದು ವಾರ ಕಳೆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಈ ಹಿನ್ನಲೆಯಲ್ಲಿ ಆತೀಷ್ ಗೆಳೆಯ ಲಿಖಿತ್ ರೈ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಒಬ್ಬಂಟಿ ಹೋರಾಟ ಮಾಡಿದ್ದಾರೆ.
ಸ್ನೇಹಿತನನ್ನು ಕಳೆದುಕೊಂಡ ನೋವಿನಿಂದ ಲಿಖಿತ್ ರೈ ಮೌನ ಪ್ರತಿಭಟನೆ ನಡೆಸಿದ್ದಾರೆ. ಜಸ್ಟಿಸ್ ಫಾರ್ ಆತಿಷ್, Mangaluru Needs Road Suraksha Bhandan, Pothole be Azadi ಎಂಬ ಸ್ಲೋಗನ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಅಕ್ರಮವಾಗಿ ಸುಂಕ ವಸೂಲಾತಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರಿಯಾಗಿ ರಸ್ತೆ ನಿರ್ವಹಣೆ ಮಾಡದಿರುವುರಿಂದ ಜೀವವೊಂದು ಬಲಿಯಾಗಿದೆ. ಹೆದ್ದಾರಿಯ ಹೊಂಡ ಗುಂಡಿಗಳ ಬಗ್ಗೆ ಬಹಳಷ್ಟು ಮಾಧ್ಯಮಗಳು ಸುದ್ದಿ ಬಿತ್ತರಿಸಿ ಗಮನ ಸೆಳೆದಿತ್ತು. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಳ್ಳಲೇ ಇಲ್ಲ.
ಪ್ರಾಧಿಕಾರದ ತಪ್ಪಿನಿಂದಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತೀಷ್ ಬಲಿಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗೆ ತೇಪೆ ಹಾಕುವ ಕಾರ್ಯ ಸಾಗಿದೆ.
Laxmi News 24×7