ಬೆಂಗಳೂರು: ಪಕ್ಷದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಘಟನೆಯಿಂದ ಕಾರ್ಯಕರ್ತರಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.
ಇದೇ ಮೊದಲ ಬಾರಿ ಬಿಜೆಪಿ ಕಾರ್ಯಕರ್ತರು ತನ್ನದೇ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಮುತ್ತಿಗೆ, ಗೃಹ ಸಚಿವರ ಮುತ್ತಿಗೆಯಂತಹ ಚಟುವಟಿಕೆ ನಡೆಸಿದ್ದಾರೆ.
ರಾಜ್ಯಾದ್ಯಂತ ಆಡಳಿತ ಪಕ್ಷದ ಸರ್ಕಾರದ ವಿರುದ್ಧ ಅವರ ಕಾರ್ತಕರ್ತರೇ ದೊಡ್ಡ ಮಟ್ಟದಲ್ಲಿ ಆಕ್ರೋಶಗೊಂಡಿದ್ದಾರೆ. ಸರ್ಕಾರ ನೀಡುತ್ತಿರುವ ಉತ್ತರದಿಂದ ಅವರೆಲ್ಲಾ ಸಮಾಧಾನಿತರಾಗುತ್ತಿಲ್ಲ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು, ಕಾರ್ಯಕರ್ತರಲ್ಲಿ ಹೊಸ ಭರವಸೆಯ ಆಶಾಕಿರಣ ಮೂಡಿದೆ.
ಆಗಸ್ಟ್ 4 ರಂದು ರಾಜ್ಯಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ರಾಜ್ಯ ಘಟಕದ ಬಳಿ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಗೃಹ ಸಚಿವರ ಯಾವುದೇ ಕಾರ್ಯಕ್ರಮ ಸದ್ಯಕ್ಕೆ ಇಲ್ಲ. ಅವರು ಆಗಮಿಸುವ ಮಾಹಿತಿಯೂ ಇಲ್ಲ ಎಂದು ರಾಜ್ಯ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಕೇಂದ್ರ ಗೃಹ ಸಚಿವರ ಭೇಟಿಗೂ ಮುನ್ನ ಪ್ರೋಟೋಕಾಲ್ ಪ್ರಕಾರ ಕೆಲವೊಂದು ಪರಿಶೀಲನೆ ಕೇಂದ್ರದಿಂದ ನಡೆಸಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಮಿತ್ ಶಾ ಆಗಮನ ಸಾಧ್ಯತೆ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಸದ್ಯ ಅಮಿತ್ ಶಾ ಪ್ರವಾಸ ಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಇನ್ನೊಂದು ದಿನದಲ್ಲಿ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.