ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಗ್ಗೆ ವ್ಯಂಗ್ಯದ ರೀತಿಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಅಭಿಮಾನಿಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಕೋರಿದ್ದಾರೆ.
ನನ್ನ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದ ಚಕ್ರವರ್ತಿ ಸೂಲಿಬೆಲೆ, ತಮ್ಮ ಪಕ್ಷದ ಶಾಸಕರ ಫೈಲ್ ಗಳಿಗೆ ಸಹಿಹಾಕಲು ಕೂಡ ಸಿಎಂ ಅವರಿಗೆ ಸಮಯದ ಅಭಾವ ಎಂದು ಪಕ್ಷದವರೇ ಟೀಕಿಸುತ್ತಾರೆ. ಮುಖ್ಯಮಂತ್ರಿಗಳಿಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿಗೆ ಭಾಗವಹಿಸಲು, ಪ್ರೀಮಿಯರ್ ಶೋ ನೋಡಲು, ಸಿನಿಮಾ ನೋಡಿ ಕಣ್ಣೀರಿಡಲು ಸಮಯವಿದೆ. ನಟನೊಬ್ಬ ನಿಧನರಾದಾಗ ಮೂರು ದಿನಗಳ ಕಾಲ ಸಮಯ ಕೊಟ್ಟಿದ್ದಾರೆ. ಮುಂದೆ ವಿಕ್ರಾಂತ್ ರೋಣ ಸಿನಿಮಾವನ್ನೂ ಸಿಎಂ ನೋಡಲಿದ್ದಾರೆ..ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸೂಲಿಬೆಲೆಯವರ ಈ ಹೇಳಿಕೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಭಿಮಾನಿಗಳು ಕೆಂಡ ಕಾರಿದ್ದರು. ಇದರ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಪುನೀತ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.