ಬೆಳಗಾವಿ : ಡಿಹೆಚ್‌ಒಗೆ ‘ಕೈ’ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ ಹಿನ್ನೆಲೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ಪತ್ರ ಬರೆದಿದ್ದಾರೆ. ತಮ್ಮದೇನೂ ತಪ್ಪು ಇಲ್ಲದೇ ಇದ್ದರೂ ಜನಪ್ರತಿನಿಧಿಗಳು ತಮಗೆ ಕರೆ ಮಾಡಿ ತರಾಟೆಗೆ ತಗೆದುಕೊಳ್ಳುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ತಾಲೂಕು ಆಸ್ಪತ್ರೆಯಿಂದ ಬೆಳಗಾವಿಯ ಬಿಮ್ಸ್‌ಗೆ ನಿಯೋಜನೆಗೊಂಡ ತಜ್ಞ ವೈದ್ಯರು ಹಾಗೂ ಇತರ ಸಿಬ್ಬಂದಿ ಪಟ್ಟಿ ಸಮೇತ ಪತ್ರ ಬರೆದಿದ್ದಾರೆ. ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರ ಪತ್ರಗಳ ಹಾಗೂ ಮೌಖಿಕ ಆದೇಶಗಳ ಅನ್ವಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಿಮ್ಸ್ ಗೆ ನಿಯೋಜಿಸಲಾಗಿದೆ ಎಂದು ಡಾ. ಮಹೇಶ್ ಕೋಣಿ ಉಲ್ಲೇಖಿಸಿದ್ದಾರೆ.