ಬೆಂಗಳೂರು: ಕರಾವಳಿಯಲ್ಲಿ ಅಮಾ ಯಕ ಯುವಕರು ವಿನಾಕಾರಣ ದುರಂತ ಸಾವನ್ನಪ್ಪುತ್ತಿದ್ದು, ಅಲ್ಲಿನ ಸಮುದಾಯಗಳು ಅತಿ ಜರೂರಾಗಿ ಜಾಗೃತಗೊಳ್ಳಬೇಕು ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೆಟ್ಟ ಕಾರಣಕ್ಕಾಗಿ ನಮ್ಮ ಕರಾವಳಿ ರಾಜ್ಯಕ್ಕೆ ಮಾದರಿ ಯಾಗುವುದು ಬೇಡ ಎಂದೂ ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ಯುವ ಜನತೆಗೆ ಭಾವನಾ ತ್ಮಕ ಪತ್ರ ಬರೆದಿರುವ ಅವರು, ಕರಾವಳಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನ್ನನ್ನು ನೋವಿನಲ್ಲಿ ಮುಳುಗಿಸಿವೆ. ಬಾಳಿ ಬದುಕಬೇಕಾದ ಯುವಕರು ಕ್ಷುಲ್ಲಕ ಕಾರಣಗಳಿಗಾಗಿ, ಕೆಲವೊಮ್ಮೆ ಕಾರಣಗಳೇ ಇಲ್ಲದೆ ಹತ್ಯೆಗೀಡಾಗುತ್ತಿರುವುದನ್ನು ಕನ್ನಡ ನಾಡಿನ ಆತ್ಮಸಾಕ್ಷಿ ಸಹಿಸಬಾರದು. ಇಂಥ ಹತ್ಯೆಗಳನ್ನು ನಾಗರಿಕ ಸಮಾಜ ಸಹಿಸದು.
ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ – ದಯಮಾಡಿ ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ. ವೃದ್ಧಾಪ್ಯದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಗಳನ್ನು, ಎಳೆ ವಯಸ್ಸಿನಲ್ಲಿ ಅಣ್ಣ ತಮ್ಮಂದಿರನ್ನು, ಗಂಡಂದಿರನ್ನು ಕಳೆದುಕೊಂಡವರ ಹೃದಯದ ಬೆಂಕಿಯನ್ನೊಮ್ಮೆ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
“ಕೊಂದು ಉಳಿಸಿಕೊಳ್ಳುವ ಧರ್ಮವಿದ್ದರೆ ಅದನ್ನು ಧರ್ಮ ಎನ್ನಲಾಗುತ್ತದೆಯೇ’ ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು. ಧರ್ಮಕ್ಕಾಗಿ ಕೊಲೆ ಮಾಡಿದ್ದೇವೆ ಎನ್ನುವವರನ್ನು ಯಾವ ದೇವರೂ ಕ್ಷಮಿಸುವುದಿಲ್ಲ ಎಂದು ನಮ್ಮ ಗುರು ಹಿರಿಯರು ಹೇಳುತ್ತಿದ್ದರು ಎಂದಿದ್ದಾರೆ.