Breaking News

ನೌಕರರಿಗೆ ಟೆಸ್ಟ್ ಟೆನ್ಶನ್!; ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ, ಇನ್ನೂ ಪಾಸಾಗಿಲ್ಲ ಹಲವರು.

Spread the love

ಬೆಂಗಳೂರು :ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (ಸಿಎಲ್​ಟಿ)ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿಯಮವೇ ಈಗ ಅವ್ಯವಹಾರಕ್ಕೆ ಆಸ್ಪದವಾಗಿದೆ.

ಹಲವು ಬಾರಿ ಪರೀಕ್ಷೆ ಬರೆದರೂ ಅನುತ್ತೀರ್ಣ ರಾಗಿರುವವರು ಹಾಗೂ ಕಂಪ್ಯೂಟರ್ ಜ್ಞಾನವಿಲ್ಲದೆ ಟೆಸ್ಟ್​ಗೆ ಹಾಜರಾಗಲು ಹೆದರುತ್ತಿರುವ ನೌಕರರು ಅಡ್ಡದಾರಿ ಹಿಡಿದಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ತಲಾ ನೌಕರನಿಂದ 20ರಿಂದ 30 ಸಾವಿರ ರೂ. ಲಂಚ ಪಡೆದು ಪಾಸ್ ಆಗಲು ಸಹಾಯ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು, ನಿಗಮ-ಮಂಡಳಿಗಳ ಅಧಿಕಾರಿ ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳುವ ಅವಧಿಯನ್ನು 2022ರ ಡಿ.31ರವರೆಗೂ ಸರ್ಕಾರ ವಿಸ್ತರಿಸಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಿಗಮ-ಮಂಡಳಿ ಸೇರಿ ಕೆಲ ಇಲಾಖೆಗಳ ನೌಕರರು ಹಲವು ಬಾರಿ ಪರೀಕ್ಷೆಗೆ ಹಾಜರಾದರೂ, ಉತ್ತೀರ್ಣರಾಗಿಲ್ಲ. ಮೊದಲ ಬಾರಿ ಪರೀಕ್ಷೆಗೆ ಉಚಿತ ಅವಕಾಶ ಇರುತ್ತದೆ. ನಂತರದ ಅವಕಾಶಗಳಿಗೆ 359 ರೂ. ಹಾಗೂ ಬ್ಯಾಂಕ್ ಸರ್ವೀಸ್ ಶುಲ್ಕವನ್ನು ನೌಕರನೇ ಪಾವತಿಸಬೇಕು.

2021ರ ಅಂತ್ಯದವರೆಗೆ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು, 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 1.65 ಲಕ್ಷ ನೌಕರರ ಮಾತ್ರವೇ ಉತ್ತೀರ್ಣರಾಗಿದ್ದರು. ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದರು.

ರಾಜ್ಯದಲ್ಲಿ ಇನ್ನೂ ಅಂದಾಜು 3.50 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಹೀಗಾಗಿಯೇ 2022ರ ಅಂತ್ಯದವರೆಗೂ ಅವಧಿ ವಿಸ್ತರಿಸಲಾಗಿದೆ. ಆದರೆ, ಈಗಾಗಲೆ ಹಲವರು ಹಲವು ಸಲ ಪರೀಕ್ಷೆ ತೆಗೆದುಕೊಂಡರೂ ಪಾಸ್ ಆಗಿಲ್ಲ. ಪ್ರತಿ ಬಾರಿಯೂ ಒಒಡಿ ಹೆಸರಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗುವ ಕಿರಿಕಿರಿ ಜತೆಗೆ ಶುಲ್ಕ ಪಾವತಿಸುವ ಮೂಲಕ ಜೇಬಿಗೂ ಕತ್ತರಿ. ಹೀಗಾಗಿ ಲಂಚ ಕೊಟ್ಟು ಪಾಸ್ ಆಗೋಣ ಎನ್ನುವ ಮನಃಸ್ಥಿತಿಗೆ ನೌಕರರು ಬಂದಿದ್ದಾರೆ. ಯಾವುದೇ ಇಲಾಖೆ ಪರೀಕ್ಷೆಯಾದರೂ ತರಬೇತಿ ಕೊಟ್ಟು ನಂತರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೊಡಬೇಕು

. ಆದರೆ, ಸಿಎಲ್​ಟಿ ಪರೀಕ್ಷೆ ಬಗ್ಗೆ ಯಾವುದೇ ಟ್ರೖೆನಿಂಗ್ ಕೊಡದೆ ನೇರವಾಗಿ ಹೋಗಿ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಕಂಪ್ಯೂಟರ್ ಜ್ಞಾನ ಇಲ್ಲದ ನೌಕರರು, ಎಷ್ಟು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಗಣಕೀಕೃತ ಪದಗಳಾಗಿರುವುದರಿಂದ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲೂ ಆಗಲ್ಲ.

ಎಂಎಸ್ ವರ್ಡ್​ನಲ್ಲಿ ಫಾಂಟ್ ಸೈಜ್ ಹೆಚ್ಚು ಮಾಡಲು ಯಾವ ಮೆನುಗೆ ಹೋಗಬೇಕು? ಕೀ ಪ್ಯಾಡ್​ನಲ್ಲಿ ಎಷ್ಟು ಅಕ್ಷರಗಳಿವೆ? ಸಿಪಿಯು ಎಂದರೇನು? ಹೀಗೆ 80 ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕು. ಟೆಕ್ನಿಕಲ್ ಕೋರ್ಸ್ ಮಾಡಿರುವವರು ಹಾಗೂ ದಿನನಿತ್ಯ ಕಂಪ್ಯೂಟರ್ ಒಡನಾಟ ಇರುವ ಕ್ಲರಿಕಲ್ ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ಅಧಿಕಾರಿ ಮತ್ತು ನೌಕರರ ಅಭಿಪ್ರಾಯವಾಗಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ