ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಆ.1 ಮತ್ತು 2ರಂದು ಜೋರು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಇಲಾಖೆ, ಆರೆಂಜ್ ಅಲರ್ಟ್ ಕೊಟ್ಟಿದೆ.
ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.30ರಂದು ಹಾಗೂ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.
ವಾಡಿಕೆಗಿಂತ ತುಸು ಹೆಚ್ಚಳ: ದೇಶದಲ್ಲಿ ಜೂ 1ರಿಂದ ಜು.27ವರೆಗೆ 408 ಮಿಮೀ ಮಳೆಯಾಗಬೇಕಿತ್ತು. ಆದರೆ. 451 ಮಿಮೀ ಮಳೆಯಾಗಿದ್ದು, ಶೇ.10 ವಾಡಿಕೆಗಿಂತ ಹೆಚ್ಚು ಸುರಿದಿದೆ. ದಕ್ಷಿಣ ಭಾರತದಲ್ಲಿ 339 ಮಿಮೀ ಮಳೆ ಬದಲಾಗಿ 440 ಮಿಮೀ ಮಳೆಯಾಗಿದ್ದು, ಶೇ.30 ಹಾಗೂ ಮಧ್ಯ ಭಾರತದಲ್ಲಿ 448 ಮಿಮೀ ಮಳೆ ಆಗಬೇಕಿತ್ತು, ಆದರೆ, 562 ಮಿಮೀ ಮಳೆಯಾಗಿದ್ದು, ಶೇ.25 ಹೆಚ್ಚು ಮಳೆ ಬಿದ್ದಿದೆ. ವಾಯುವ್ಯ ಭಾರತದಲ್ಲಿ 257 ಮಿಮೀ ಮಳೆ ಬದಲಾಗಿ 261 ಮಳೆಯಾಗಿದ್ದು, ವಾಡಿಕೆಯಷ್ಟೇ ಹಾಗೂ ಈಶಾನ್ಯ ರಾಜ್ಯಗಳಲ್ಲಿ 703 ಮಳೆ ಬದಲಾಗಿ 597 ಮಿಮೀ ಮಳೆಯಾಗಿದ್ದು, ಶೇ.15 ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಅದೇ ರೀತಿ, ಜೂ.1ರಿಂದ ಜು.29ರವರೆಗೆ ಕರ್ನಾಟಕದಲ್ಲಿ 454 ಮಿಮೀ ಮಳೆಯಾಗಬೇಕಿತ್ತು. ಆದರೆ, 512 ಮಿಮೀ ಮಳೆಯಾಗಿದ್ದು, ಶೇ.13 ಹೆಚ್ಚು ಮಳೆಯಾಗಿದೆ.