ಸುಳ್ಯ: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ತನಿಖೆ ಪ್ರಗತಿಯಲ್ಲಿದೆ. ಮೇಲ್ನೋಟಕ್ಕೆ ಹತ್ಯೆಗೆ 2-3 ಕಾರಣಗಳು ಕಂಡುಬರುತ್ತಿದೆ. ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಬೆಳ್ಳಾರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ಕಮಿಷನರ್, ಉಡುಪಿ ಪೊಲೀಸರ ಸಹಾಯ ಪಡೆದು ಈಗಾಗಲೇ ಆರು ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಅವಕಾಶ ಕೊಡಬೇಕು ಎಂದು ಅವರು ವಿನಂತಿಸಿದರು.
ಪೊಲೀಸರು ವಶಕ್ಕೆ ಪಡೆದವರು ಕೃತ್ಯದಲ್ಲಿ ಭಾಗಿಯಾದವರೇ ಅಥವಾ ಪರೋಕ್ಷವಾಗಿ ಸಹಕರಿಸಿದವರೇ ಎಂಬ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಸ್ಪಷ್ಟ ಕಾರಣ ತಿಳಿಸುತ್ತೇವೆ ಎಂದರು.