ಬೆಳಗಾವಿ: ನಾಯಿಗಳ ಹಾವಳಿಗೆ ಕುಂದಾನಗರಿ ಜನ ಬೆಚ್ಚಿ ಬಿದಿದ್ದು, ಕಳೆದ ಆರು ತಿಂಗಳಲ್ಲಿ ಅದೇಷ್ಟೂ ಜನರಿಗೆ ನಾಯಿ (Dog Attack) ಕಚ್ಚಿದೆ ಅನ್ನೋದನ್ನ ಕೇಳಿದ್ರೇ ನೀವು ಶಾಕ್ ಆಗುತ್ತೀರಿ. ಸಾವಿರಲ್ಲ ಎರಡು ಸಾವಿರಲ್ಲ ಬರೋಬ್ಬರಿ 14ಸಾವಿರ ಜನರ ರಕ್ತ ಹೀರಿವೆ ನಾಯಿಗಳು. ಆರೋಗ್ಯ ಇಲಾಖೆಯಿಂದಲೇ ಸ್ಪೋಟಕ ಮಾಹಿತಿ ಹೊರ ಬಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ವಾನಗಳು ಅಟ್ಟಹಾಸ ಮೆರೆಯುತ್ತಿವೆ. ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಗಿದೆ.
ಈ ಕುರಿತಾಗಿ ಡಿಎಚ್‌ಒ ಡಾ.ಮಹೇಶ್ ಕೋಣೆ ಹೇಳಿಕೆ ನೀಡಿದ್ದು, ಆರು ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 14,278ಜನರಿಗೆ ನಾಯಿಗಳು ಕಚ್ಚಿವೆ. ಜನವರಿ. 1ರಿಂದ ಜುಲೈವರೆಗೂ ನಾಯಿ ಕಡಿತದ ಕೇಸ್ ದಾಖಲಾಗಿವೆ. ಕಳೆದ ವರ್ಷ 1360ಜನರಿಗೆ ನಾಯಿ ಕಡಿತ ಕೇಸ್ ದಾಖಲಾಗಿವೆ. ಆದರೆ ಈ ವರ್ಷ ಆರು ತಿಂಗಳಲ್ಲೇ ಹೆಚ್ಚು ಪ್ರಮಾಣದಲ್ಲಿ ನಾಯಿ ಕಚ್ಚಿವೆ. ಈ ಕುರಿತು ಇಲಾಖೆ ಸಭೆಯಲ್ಲಿ ಪ್ರಸ್ತಾವನೆ ಕೂಡ ಆಗಿದೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚು ನಾಯಿ ಕಡಿತದ ಕೇಸ್‌ಗಳು ಬಂದಿವೆ. ನಾಯಿ ಕಡಿತಕ್ಕೆ ಲಸಿಕೆ ಇದ್ದು ಯಾವ ತೊಂದರೆ ಇಲ್ಲಾ. 1548 ಲಸಿಕಾ ಡೋಸ್‌ಗಳು ಸದ್ಯ ಸ್ಟಾಕ್ ಇದೆ. ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಕಡೆ ಔಷಧಿ ಸ್ಟಾಕ್ ಇದೆ. ನಾಯಿಗಳ ಸಂತಾನ ಹರಣ ಮಾಡಿದರೆ ಇದಕ್ಕೆ ಕಡಿವಾಣ ಹಾಕಬಹುದು. ಇಲ್ಲವಾದರೇ ಎಲ್ಲ ನಾಯಿಗಳನ್ನ ಬೇರೆ ಕಡೆ ಸ್ಥಳಾಂತರ ಮಾಡಬೇಕು ಎಂದು ಡಿಎಚ್‌ಒ ಡಾ. ಮಹೇಶ್ ಕೋಣೆ ಹೇಳಿದರು.