ಮಂಡ್ಯ: ‘ದೆಹಲಿಗೆ ಭೇಟಿ ನೀಡಿದ ನಂತರ ನಿಗಮ, ಮಂಡಳಿ ನೇಮಕಾತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮಂತ್ರಿಮಂಡಲಕ್ಕೆ ಸೇರ್ಪಡೆ ವಿಚಾರವನ್ನೂ ಪಕ್ಷದ ವರಿಷ್ಠರ ಜೊತೆ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದರು.
ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲಿದ್ದು ನೇಮಕಾತಿ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಿಗಮ, ಮಂಡಳಿಗೆ ನೇಮಕಾತಿ ಕುರಿತಂತೆ ಇಲ್ಲಿಯವರೆಗೂ ಯಾವುದೇ ಚರ್ಚೆ ನಡೆಸಿಲ್ಲ’ ಎಂದರು.
ಕೆ.ಎಸ್.ಈಶ್ವರಪ್ಪ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವರೇ ಎಂಬ ಪ್ರಶ್ನೆಗೆ ‘ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ ಅಂತಿಮ ಹಂತಕ್ಕೆ ಬಂದ ನಂತರ ಆ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದರು.
ಸಿ.ಎಂ ಕುರ್ಚಿಗಾಗಿ ಪೈಪೋಟಿ: ‘ಕಾಂಗ್ರೆಸ್, ಜೆಡಿಎಸ್‌ನಲ್ಲಿ ಸಿ.ಎಂ ಕುರ್ಚಿಗಾಗಿ ಪೈಪೋಟಿ ಆರಂಭವಾಗಿದೆ. ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಮೊದಲಿನಿಂದಲೂ ಎಚ್.ಡಿ.ಕುಮಾರಸ್ವಾಮಿ ಕೇಳುತ್ತಿದ್ದಾರೆ. ಈ ಬಾರಿ ತನಗೆ ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಅವರೂ ಕೇಳುತ್ತಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ.