ಎಂ.ಕೆ.ಹುಬ್ಬಳ್ಳಿ: ಬೆಳೆದ ಗಿಡಕಂಟಿಗಳು, ತಿಪ್ಪೆ ಗುಂಡಿಗಳು, ಬೀಳುತ್ತಿರುವ ತಡೆಗೋಡೆಗಳು, ತ್ಯಾಜ್ಯಗಳನ್ನು ಎಸೆಯುವ ಜಾಗೆಯಾಗಿದೆ ಇಟಗಿ ಗ್ರಾಮದ ದೊಡ್ಡ ಕೆರೆ. ಒಂದು ಕಾಲಕ್ಕೆ ಈ ಕೆರೆ ನೀರನ್ನು ದೇವರ ಪೂಜೆಗೂ, ದಿನಬಳಕೆಗೂ ಉಪಯೋಗಿಸುತ್ತಿದ್ದರು ಎಂದರೆ ಈಗ ಯಾರೂ ನಂಬಲು ಸಾಧ್ಯವಿಲ್ಲ.
ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಸುಮಾರು 53 ಎಕರೆ 15 ಗುಂಟೆ ಈ ಕೆರೆಯತ್ತ ಯಾವೋಬ್ಬ ಅಧಿ ಕಾರಿಗಳು ಗಮನ ಹರಿಸುತ್ತಿಲ್ಲ. ಮಳೆಗಾಲ ಮುಗಿದು ಮತ್ತೆ ಮತ್ತೆ ಬಂದರೂ, ಕೆರೆ ತಡೆಗೋಡೆ ಕುಸಿಯುತ್ತಿದ್ದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಕಳೆದ ಎರಡ್ಮೂರು ವರ್ಷಗಳಿಂದ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ತಡೆಗೋಡೆ ನೀರಿನ ರಭಸಕ್ಕೆ ಮತ್ತು ವಾಹನಗಳ ಓಡಾಟಕ್ಕೆ ಕುಸಿಯುತ್ತಿದೆ. ಗ್ರಾಪಂ ಎದುರಿಗೆ ಇರುವ ಕೆರೆಯ ತಡೆಗೋಡೆ ಸಂಪೂರ್ಣ ಕುಸಿದಿದೆ. ಇದೇ ರಸ್ತೆ ಮೂಲಕ ನೂರಾರು ಚಿಕ್ಕಮಕ್ಕಳು ಶಾಲೆಗಳಿಗೆ ತೆರಳುತ್ತಾರೆ. ಇದು ಮಕ್ಕಳಿಗೆ ಅಪಾಯಕಾರಿಯಾಗಿದೆ.
ಇನ್ನು ಪತ್ರಿಬಸವೇಶ್ವರ ದೇವಸ್ಥಾನದ ಎದುರಿನ ಕೆರೆಯ ತಡೆಗೋಡೆ ಕಳೆದ ಎರಡ್ಮೂರು ವರ್ಷಗಳಿಂದ ಕುಸಿಯುತ್ತಿದ್ದರೂ ಸಣ್ಣ ನೀರಾವರಿ ಇಲಾಖೆ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಹೀಗೆಯೇ ಮುಂದುವರೆದರೆ ತಡೆಗೋಡೆ ಸಂಪೂರ್ಣ ಹಾಳುತ್ತದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯದಲ್ಲಿಯೇ ಸಮೀಕ್ಷೆ ಕೈಗೊಂಡು ಕೆರೆಯ ಸುತ್ತಲೂ ಸಂಪೂರ್ಣ ತಡೆಗೋಡೆ ನಿರ್ಮಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. –ವಿಶ್ವನಾಥ ಹಲ್ಯಾಳ, ಕಿರಿಯ ಇಂಜನಿಯರ್, ನೀರಾವರಿ ಇಲಾಖೆ
ಈ ಐತಿಹಾಸಿಕ ಕೆರೆ ಅಭಿವೃದ್ಧಿಯಾಗಬೇಕು. ತಕ್ಷಣ ಕೆರೆಗೆ ತಡೆಗೋಡೆ ಅವಶ್ಯಕತೆಯಿದೆ. ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು. –ವಿ.ವಿ.ಬಡಿಗೇರ, ನಿಕಟಪೂರ್ವ ಕಸಾಪ ತಾಲೂಕು ಅಧ್ಯಕ್ಷ