ಬೆಂಗಳೂರು,ಸೆ.14- ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಹಿಂದಿ ಸಪ್ತಾಹ ಕಾರ್ಯಕ್ರಮ ನಡೆಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಹಿಂದಿ ಹೇರಿಕೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನಗರದಲ್ಲಿಂದು ತಮ್ಮ ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ, ಕನ್ನಡ ಚಳವಳಿ ಕೇಂದ್ರ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ನಗರದ ವಿವಿಧೆಡೆ ಪ್ರತಿಭಟನೆ ನಡೆಸಿ ಹಿಂದಿ ದಿವಸ್ ಆಚರಣೆಯನ್ನು ತೀವ್ರವಾಗಿ ವಿರೋಧಿಸಿದರು.
ಆನಂದ್ ರಾವ್ ವೃತ್ತದ ಬಳಿ ಹಿಂದಿ ಸಪ್ತಾಹ ಕಾರ್ಯಕ್ರಮದ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಒಕ್ಕೂಟದ ಸರ್ಕಾರವು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿರುವುದು ದೇಶದ ಇತರೆ ಭಾಷಿಗರಿಗೆ ಮಾಡಿದ ಅನ್ಯಾಯವಾಗಿದೆ.
ಭಾರತ ಬಹುಭಾಷೆ, ಬಹುಸಂಸ್ಕøತಿಗಳ ನಾಡು. ಬಹುತ್ವ ಉಳಿದರಷ್ಟೆ ಒಕ್ಕೂಟ ಉಳಿಯಲು ಸಾಧ್ಯ. ಹಿಂದಿ ಭಾಷೆಯೊಂದಕ್ಕೆ ಮಾತ್ರ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ ಸಾಂವಿಧಾನಿಕ ಸಂಸ್ಥೆಗಳ ಮೂಲಕ ಎಲ್ಲಾ ಹಿಂದಿಯೇತರ ಜನಗಳ ಮೇಲೆ ಹೇರಿಕೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು.
ಹಿಂದಿ ದಿನಾಚರಣೆ ಕೊನೆಯಾಗಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡುವುದಾಗಲಿ, ಯಾವ ಭಾಷೆಯನ್ನೂ ನಿರ್ಲಕ್ಷಿಸುವುದಾಗಲೀ ಮಾಡಬಾರದು. ಸಂವಿಧಾನಕ್ಕೆ ತಿದ್ದುಪಡಿ ತಂದು ಎಲ್ಲಾ 22 ಭಾಷೆಗಳನ್ನು ರಾಷ್ಟ್ರ ಭಾಷೆಗಳನ್ನಾಗಿ ಮಾಡಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಭಾಷೆಗಳಿಗೂ ಸಮಾನ ಹಕ್ಕುಗಳು ದೊರೆಯಬೇಕೆಂದು ಒತ್ತಾಯಿಸಿದರು.
# ಕರಾಳ ದಿನ:
ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಹಿಂದಿ ಭೂತ ದಹನ ಮಾಡಲಾಯಿತು. ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣ ಕುಮಾರ್ ಮಾತನಾಡಿ, ನಮ್ಮ ಸ್ವಾಭಿಮಾನ ಕೆಣಕುವ ಹಿಂದಿ ದಿವಸ್ ನಿಲ್ಲಬೇಕು. ಹಿಂದಿ ಹೇರಿಕೆ ನಿಲ್ಲದಿದ್ದರೆ ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಬೇಕು ಎಂದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎನ್.ಜಗದೀಶ್ ಮಾತನಾಡಿ, ಯಾವ ಭಾಷೆಯನ್ನೂ ನಾವು ವಿರೋಧಿಸುವುದಿಲ್ಲ. ಆದರೆ ಅನಗತ್ಯವಾಗಿ ಬೇರೆ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ ಎಂದರು.
ಕರವೇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮಾತನಾಡಿ, ಕನ್ನಡ ನಮ್ಮ ಸಾರ್ವಭೌಮ ಮಾತೃಭಾಷೆ. ನಾಡಭಾಷೆಯೇ ನಮಗೆ ರಾಷ್ಟ್ರಭಾಷೆ, ಅನಗತ್ಯವಾಗಿ ಹಿಂದಿ ಭಾಷೆ ಹೇರುವ ಕ್ರಮವನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ