ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರದಿದ್ದು ಇದರಿಂದ ಚಿಕ್ಕೋಡಿ ತಾಲೂಕಿನ ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ.
ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಇದರಿಂದಾಗಿ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ, ಮಾಂಜರಿ-ಸೌಂದತ್ತಿ, ಮಲಿಕವಾಡ-ದತ್ತವಾಡ, ಯಕ್ಸಂಬಾ-ದಾನವಾಡದ ಕೆಳಮಟ್ಟದ ಸೇತುವೆಗಳು ಮುಳಗಡೆಯಾಗಿವೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಒಂದೇ ದಿನದಲ್ಲಿ ಒಂದು ಅಡಿಯಷ್ಟು ನೀರು ಏರಿಕೆಯಾಗಿದ್ದು ನದಿತೀರದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣಾ ನದಿ ನೀರು ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತದಿಂದ ನದಿತೀರದ ಪ್ರದೇಶಗಳಲ್ಲಿ ಎನ್ ಡಿಆರ್ ಎಫ್ ತಂಡ, ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನದಿಗೆ ಯಾರೂ ತೆರಳದಂತೆ ಬ್ಯಾರಿಕೇಡ್ ಹಾಕಲಾಗಿದ್ದು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಈ ಮಧ್ಯೆ ಅಂಬೋಲಿ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಇದರಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಮಾಹಿತಿಯಂತೆ ಘಟಪ್ರಭಾ ನದಿಯ ಮೂಲಕ ಹಿಡಕಲ್ ಜಲಾಶಯಕ್ಕೆ 14 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದೇ ರೀತಿ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ಜಲಾಶಯಕ್ಕೆ ಐದು ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.