ಬೆಂಗಳೂರು: ರಾಜ್ಯದ ಲಕ್ಷಾಂತರ ಸ್ವತ್ತುದಾರರಿಗೆ ನೆಮ್ಮದಿ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ರಾಜ್ಯಾದ್ಯಂತ ಇರುವ ಬಿ ಖಾತಾ ಸ್ವತ್ತುಗಳನ್ನು ಎರಡು ತಿಂಗಳಿನಲ್ಲಿ ಎ ಖಾತೆಗೆ ಪರಿವರ್ತನೆ ಮಾಡಲು ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳ ಆದಾಯ ಬರುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಅಕ್ರಮ-ಸಕ್ರಮ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಹಾಗಾಗಿ ರಾಜಧಾನಿ ಹೊರತುಪಡಿಸಿ ಇನ್ನುಳಿದ ನಗರಗಳಲ್ಲಿ ಬಿ ಖಾತೆಗಳನ್ನು ಎ ಖಾತೆಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಅಂದಾಜು 10 ಲಕ್ಷ ಬಿ ಖಾತೆಗಳು ಬೆಂಗಳೂರು ಬಿಟ್ಟು ಉಳಿದ ನಗರಗಳಲ್ಲಿವೆ. ಇವುಗಳಿಗೆ ತೆರಿಗೆ ನಿಗದಿಯಾದರೆ ಸ್ಥಳೀಯ ನಗರ ಸಂಸ್ಥೆಗಳಿಗೆ ಕನಿಷ್ಠ 100ರಿಂದ 150 ಕೋಟಿ ರೂ.ಗಳ ಆದಾಯ ಬರಲಿದೆ. ಎ ಖಾತೆಗೆ ಪರಿವರ್ತನೆಯಾಗುವ ನಿವೇಶನದಾರರು ಬ್ಯಾಂಕ್ಗಳಿಂದ ಸಾಲ ಪಡೆಯುವುದು ಸೇರಿ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು. ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎರಡು ಲಕ್ಷಕ್ಕೂ ಅಧಿಕ ಬಿ ಖಾತೆದಾರರಿದ್ದು, ನಗರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೇರಿ 10 ಲಕ್ಷ ಖಾತೆ ಇರಬಹುದೆಂದು ಅಂದಾಜು ಮಾಡಲಾಗಿದೆ ಎಂದರು.
ಸಿಎ ನಿವೇಶನಗಳ ಮಾಹಿತಿ ಕೋರಿಕೆ: ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಿರ್ವಿುಸಲಾದ ಲೇಔಟ್ಗಳಲ್ಲಿ ನಾಗರಿಕ ಬಳಕೆಗೆಂದು ಮೀಸಲಿಟ್ಟ (ಸಿಎ) ನಿವೇಶನಗಳು ಸಮರ್ಪಕ ನಿರ್ವಹಣೆಯಿಲ್ಲದೆ ಒತ್ತುವರಿಯಾಗುತ್ತಿರುವ ಕುರಿತು ಸರ್ಕಾರಕ್ಕೆ ದೂರುಗಳು ಬಂದಿವೆ. ಇಂಥ ನಿವೇಶನಗಳ ಮಾಹಿತಿ ನೀಡುವಂತೆ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿ.ಎ.ಬಸವರಾಜ ವಿವರಿಸಿದರು. ವಿವರ ದೊರೆತ ನಂತರ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ, ಶಾಲೆ, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ನೀಡುವ ಅಥವಾ ಸರ್ಕಾರದ ಬೇರೆ ಕೆಲಸಗಳಿಗೆ ಮೀಸಲಿಡುವ ಬಗ್ಗೆ ತೀರ್ವನಿಸುತ್ತೇವೆ ಎಂದರು.