ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ಗಳು, ಅರಮನೆಯಂಥ ಬಂಗಲೆಗಳ ಮೇಲೆ ಬುಲ್ಡೋಜರ್‌ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಒಂದರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂಥ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೋಡಿ. ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ ಎಂದು ಹೆಚ್ಡಿಕೆ ಘೋಷಣೆ ಮಾಡಿದರು.ಬೆಂಗಳೂರಿನಲ್ಲಿ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗುತ್ತಿಲ್ಲ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಎಲ್ಲ ಅನುಕೂಲಗಳಿದ್ದರೆ, ಬಡವರ ಬಡಾವಣೆಗಳಿಗೆ ಕೊನೆಪಕ್ಷ ರಸ್ತೆಗಳಿಗೆ ಡಾಂಬರು ಇಲ್ಲ, ವಿದ್ಯುತ್ ದೀಪಗಳಿಲ್ಲ. ಯಲಹಂಕ ವಿಧಾನಸಭೆ ಕ್ಷೇತ್ರದ ಬೆಟ್ಟಹಳ್ಳಿ ಗ್ರಾಮಕ್ಕೆ ಹೋದರೆ ರಾಜ್ಯ ಸರ್ಕಾರದ ನಿಜವಾದ ಅಭಿವೃದ್ಧಿ ಕಣ್ಣಿಗೆ ಕಾಣುತ್ತದೆ ಎಂದು ಹರಿಹಾಯ್ದರು.