Breaking News

ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Spread the love

ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿ, ಜನರ ಸಾಹಭಾಗಿತ್ವದಿಂದ ಮಾತ್ರ ಅರಣ್ಯೀಕರಣದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ದಾಸನಪುರ ಹೋಬಳಿಯ ಮಾಚೋಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ಮಾಚೋಹಳ್ಳಿ ವೃಕ್ಷೋಧ್ಯಾನ ಕಾರ್ಯಕ್ರಮ ಮತ್ತು ವನಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮ :

ಬೆಂಗಳೂರು ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇಂದಿನ ಎಲ್ಲ ಬಡಾವಣೆಗಳಲ್ಲಿ ಉದ್ಯಾನಗಳು, ಗಿಡಮರಗಳಿವೆ. ಬೆಂಗಳೂರು ಉದ್ಯಾನನಗರ ಎಂದು ಕರೆಯಲ್ಪಡುತ್ತದೆ. ಈಗ ನಾಗರಿಕತೆ ಹೆಚ್ಚಾಗಿದ್ದು, ಉದ್ಯಮಗಳು ಹೆಚ್ಚಾಗಿದೆ. ಅರಣ್ಯ ಇಲಾಖೆ ವತಿಯಿಂದ ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ವರ್ಷ ಅರಣ್ಯೀಕರಣ ಯೋಜನೆಗಳಿಗೆ ನೂರು ಕೋಟಿ ರೂ. ಒದಗಿಸಲಾಗುವುದು :

ಪರಿಸರ ಬಹಳ ಮುಖ್ಯ. ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಗಿಡಮರಗಳಿಂದ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ. ಕಳೆದವರ್ಷ ವಿಶ್ವದ ತಾಪಮಾನ ಶೇ. 1 ರಷ್ಟು ಹೆಚ್ಚಾಗಿದ್ದು, ಹಿಮಬಂಡೆಗಳು ಕರುಗುತ್ತಿವೆ. ಇದರಿಂದ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ. ಈ ಸಾಲಿನ ಆಯವ್ಯಯದಲ್ಲಿ ಹಸಿರು ಬಜೆಟ್ ನ್ನು ರೂಪಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪರಿಸರ ಹಾನಿಯನ್ನು ಸರಿದೂಗಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ. ಪ್ರತಿ ವರ್ಷವೂ ಪರಿಸರದ ಹಾನಿಯಿಂದಾಗುವ ಕೊರತೆಯನ್ನು ನೀಗಿಸುವ ಯೋಜನೆಗಳನ್ನು ರೂಪಿಸಲು ಅರಣ್ಯ ಇಲಾಖೆಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಬೀಜೋತ್ಸವ ಕಾರ್ಯಕ್ರಮ :

ಗಂಧದ ಮರಗಳು ಮನೆಯಲ್ಲಿದ್ದರೆ ಅದನ್ನು ನಿಭಾಯಿಸುವುದು ಕಷ್ಟವಾಗಿದ್ದು, ಈ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಸರಳೀಕರಿಸಿ ಗಂಧ ಮರಗಳ ನಿರ್ವಹಣೆಗೆ ಈ ವರ್ಷದ ಆಯವ್ಯಯದಲ್ಲಿ ಅನುಕೂಲ ಕಲ್ಪಿಸಲಾಗಿದೆ. ಕನ್ನಡ ನಾಡನ್ನು ಗಂಧದ ನಾಡು ಎಂಬ ಖ್ಯಾತಿ ಇದೆ. ಗಂಧದ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತದೆ. ಆದ್ದರಿಂದ ಗಂಧದ ಮರಗಳನ್ನು ಹೆಚ್ಚಾಗಿ ಬೆಳೆಸಿ, ರಕ್ಷಣೆ ನೀಡಲು ಈ ಯೋಜನೆಗಳನ್ನು ರೂಪಿಸಲಾಗಿದೆ. ಬೀಜೋತ್ಸವ ಕಾರ್ಯಕ್ರಮವನ್ನು ರೂಪಿಸಿ ಎರಡೂವರೆ ಕೋಟಿ ಬೀಜಗಳನ್ನು ಈ ವರ್ಷ ಬಿತ್ತಲಾಗುತ್ತಿದೆ. ಅರಣ್ಯವೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ ಬೀಜಗಳನ್ನು ಬಿತ್ತುವ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಮಾಡಲಾಗುವುದು ಎಂದರು.

ನೀವು ನೆಡುವ ಗಿಡಗಳಿಗೆ ಪ್ರೀತಿಪಾತ್ರರ ಹೆಸರು ನೀಡಿ – ಮಕ್ಕಳಿಗೆ ಸಿಎಂ ಕರೆ :

ಪರಿಸರಕ್ಕೆ , ಅರಣ್ಯೀಕರಣಕ್ಕೆ ಹಾಗೂ ಟ್ರೀಟಾಪ್ ಗಳನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದು ಶಾಲಾ ಮಕ್ಕಳು, ಹಿರಿಯರಿಗೆ ಸಸಿಗಳನ್ನು ನೀಡಲಾಗಿದೆ. ಹಳೇ ಬೇರು , ಹೊಸ ಚಿಗುರು ಒಂದಾದಾಗ ಮಾತ್ರ ಅರಣ್ಯೀಕರಣ ಯಶಸ್ವಿಯಾಗುತ್ತದೆ. ಮಕ್ಕಳು ನೆಡುವ ಗಿಡಗಳಿಗೆ ಒಂದು ಹೆಸರು ನೀಡಬೇಕು. ನಿಮ್ಮ ಪ್ರೀತಿಪಾತ್ರರ ಹೆಸರನ್ನು ನೀಡಿ, ಆಗ ಆ ಗಿಡದೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುತ್ತದೆ. ಇದನ್ನು ಎಲ್ಲರೂ ಮಾಡಬೇಕು. ಗಿಡಮರಗಳಿಗೆ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧವಿದೆ. ಗಿಡಮರಗಳು ಮಾನವನ ಜೀವನದ ಆಧಾರವಾಗಿದ್ದು, ಅಮೂಲ್ಯ ಕೊಡುಗೆಯನ್ನು ನೀಡುತ್ತದೆ. ಮಕ್ಕಳಲ್ಲಿ ಗಿಡಮರಗಳನ್ನು ಆರೈಕೆಯಲ್ಲಿ ಆಸಕ್ತಿಯನ್ನು ಬೆಳೆಸಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳೂ ಕೈಜೋಡಿಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಕು ಎಂದರು.

ಸ್ವಚ್ಛ ಭಾರತದ ಜೊತೆಗೆ ಹಸಿರು ಭಾರತ ನಿರ್ಮಾಣಕ್ಕೆ ಸಂಕಲ್ಪ:

ಸ್ವಚ್ಛ ಭಾರತ ಕರೆಯನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಸ್ವಚ್ಛ ಭಾರತದ ಜೊತೆಗೆ ಹಸಿರು ಭಾರತವನ್ನೂ ನಿರ್ಮಿಸುವ ಪ್ರಯತ್ನ ಎಲ್ಲರೂ ಸಂಕಲ್ಪ ಮಾಡಬೇಕೆಂದು ತಿಳಿಸಿದರು. ಮಾಚೋಹಳ್ಳಿಯ ಟ್ರೀ ಪಾರ್ಕ್ ನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದು, ಹೆಚ್ಚಿನ ಸಾರ್ವಜನಿಕರು ಇಲ್ಲಿಗೆ ಬರುವಂತೆ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಕನಿಷ್ಟ ನೂರು ಎಕರೆ ಪ್ರದೇಶದಲ್ಲಿ ಅರಣ್ಯೀಕರಣ ಮಾಡುವ ಕೆಲಸವನ್ನು ಮಾಡಬೇಕು. ರಾಜ್ಯದದಲ್ಲಿರುವ ಶೇ. 21 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ. 30 ಕ್ಕೆ ಏರಿಸಬೇಕು. ಈ ದಿಸೆಯಲ್ಲಿ ಅರಣ್ಯ ಇಲಾಖೆಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ