ಬೆಂಗಳೂರು,ಸೆ.12- ಕರ್ನಾಟಕ ಸರ್ಕಾರ ಮಾದಕ ವಸ್ತು ಪೂರೈಕೆ ಮತ್ತು ಬಳಕೆ ವಿರುದ್ಧ ಸಮರ ಸಾರಿ ದಂಧೆಯನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಿಂದ ಶೇ.90ರಷ್ಟು ಗಾಂಜಾ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.
ಕಳೆದ ಕೆಲ ದಿನಗಳಿಂದ ರಾಜ್ಯ ಪೊಲೀಸರು ಹಲವು ಸ್ಥಳಗಳಲ್ಲಿ ಗಾಂಜಾ ಸಂಗ್ರಹವನ್ನು ವಶಪಡಿಸಿಕೊಂಡಿದ್ದು, ಕಲಬುರಗಿಯಲ್ಲಿ 1,350 ಕೆಜಿ, ಕೋಲಾರದ ಕೆಜಿಎಫ್ ನಲ್ಲಿ 186 ಕೆಜಿ ಸಿಕ್ಕಿವೆ. ಕಲಬುರಗಿಯಲ್ಲಿ ವಶಪಡಿಸಿಕೊಳ್ಳಲಾದ ಗಾಂಜಾ ಒಡಿಶಾದಿಂದ ಪೂರೈಕೆಯಾಗಿದೆ ಎಂದು ಗೊತ್ತಾಗಿದೆ.
ಮಾವೋವಾದಿಗಳ ಉಪಟಳ ಹೆಚ್ಚಾಗಿರುವ ಪ್ರದೇಶಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು ಅಲ್ಲಿಂದ ರಾಜ್ಯಕ್ಕೆ ತಂದು ಇಲ್ಲಿ ಮಾದಕ ವಸ್ತು ಪೂರೈಕೆದಾರರು ಬಳಕೆದಾರರಿಗೆ ನೀಡುತ್ತಾರೆ. ಇಂತಹ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಲು ರಾಜ್ಯ ಪೊಲೀಸರು ಇದೀಗ ಮಾವೋವಾದಿಗಳ ಉಪಟಳ ಹೆಚ್ಚಾಗಿರುವ ರಾಜ್ಯಗಳ ಪೆÇಲೀಸರ ಜೊತೆ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಗೃಹ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.
# ಪೂರೈಕೆದಾರರ ಮಟ್ಟಹಾಕಲು ಸಮಯ ಬೇಕು:
ಮಾದಕ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಪೂರೈಸುತ್ತಿದ್ದ ಮತ್ತು ಬಳಸುತ್ತಿದ್ದವರನ್ನು ಬಂಧಿಸಿದ ನಂತರ ಎಲ್ಲಿಂದ ಇವು ಬರುತ್ತಿವೆ ಎಂಬ ಬಗ್ಗೆ ಮೂಲ ಹುಡುಕಲು ಹೊರಟಿದ್ದಾರೆ ರಾಜ್ಯ ಪೊಲೀಸರು. ಇದಕ್ಕೆ ಸಾಕಷ್ಟು ಸಮಯ ಹಿಡಿಯಬಹುದು. ಡ್ರಗ್ಸ್ ಪೂರೈಕೆದಾರರು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಪೂರೈಸುವಾಗ ಹಿಡಿಯುವುದು ಮುಖ್ಯವಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.
ಸ್ಯಾಂಡಲ್‍ವುಡ್‍ನ ಖ್ಯಾತ ನಟಿಯರು ಮತ್ತು ಅವರ ಜೊತೆ ಸ್ನೇಹದಲ್ಲಿದ್ದ ಆರೋಪಿಗಳ ಬಂಧನದ ನಂತರ ಡ್ರಗ್ ಪೂರೈಕೆದಾರರನ್ನು ಹಿಡಿದು ಬಂಧಿಸುವ ಕಾರ್ಯವನ್ನು ರಾಜ್ಯ ಪೊಲೀಸರು ತ್ವರಿತಗೊಳಿಸಿದ್ದಾರೆ. ಡ್ರಗ್ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ, ಯಾರ್ಯಾರು ಈ ದಂಧೆಯಲ್ಲಿದ್ದಾರೆ ಎಂದು ಆಳವಾಗಿ ತಿಳಿಯಲು ಮುಂದಾಗಿದ್ದಾರೆ.
ಸಂಪೂರ್ಣ ಪೂರೈಕೆ ಸರಣಿಯನ್ನು ಹಿಡಿದು ಮಟ್ಟ ಹಾಕಲು ಈ ಬಾರಿ ನಿರ್ಧರಿಸಿದ್ದೇವೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ನಡಿ ಡ್ರಗ್ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ರಗ್ಸ್ ಪೂರೈಕೆದಾರರನ್ನು ಪತ್ತೆಹಚ್ಚಲು ಛತ್ತೀಸ್ ಗಢ ಪೊಲೀಸರೊಂದಿಗೆ ಸಮನ್ವಯ ಮಾಡಲಾಗುತ್ತಿದೆ. ಈ ದಂಧೆಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಹೇಳಿದ್ದಾರೆ.