ವಿಜಯಪುರ : ಕಾರ್ಯಕ್ರಮದಲ್ಲಿ ತಮ್ಮನ್ನು ಆಹ್ವಾನಿಸಿದರೂ ವೇದಿಕೆ ಮೇಲೆ ಕುರ್ಚಿ ಹಾಕಿಲ್ಲ ಎಂದು ಸರ್ಕಾರಿ ಒಡೆತನದ ನಿಗಮವೊಂದರ ಅಧ್ಯಕ್ಷರು ಕಿಡಿ ಕಾರಿದ್ದು, ವೇದಿಕೆ ಮೇಲಿದ್ದ ಸಚಿವರು ಇದರಿಂದ ಬೇಸರಗೊಂಡು ಸಭೆಯಿಂದ ನಿರ್ಗಮಿಸಲು ಮುಂದಾದ ಘಟನೆ ಜರುಗಿದೆ.
ಶನಿವಾರ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಜಿಲ್ಲೆಯ ಬಬಲೇಶ್ವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಾಗೂ ತಿಕೋಟ ತಾಲೂಕಿನ ಕನಮಡಿ ಗ್ರಾಮದಲ್ಲಿ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದರು.
ಭೂಮಿ ಪೂಜೆಯ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಸಚಿವ ಸಿ.ಸಿ.ಪಾಟೀಲ ಹಾಗೂ ಸ್ಥಳೀಯ ಸ್ವಾಮೀಜಿಯೊಬ್ಬರಿಗೆ ಮಾತ್ರ ವೇದಿಕೆ ಮೇಲೆ ಕುರ್ಚಿ ಹಾಕಲಾಗಿತ್ತು. ಇದೇ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲ ವಿರುದ್ಧ ಬಿಜೆಪಿ ಸ್ಪರ್ಧಿಯಾಗಿದ್ದ ಹಾಲಿ ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಅವರಿಗೆ ಆಸನದ ವ್ಯವಸ್ಥೆ ಮಾಡಿರಲಿಲ್ಲ.
ಇದರಿಂದ ಕುಪಿತರಾದ ವಿಜುಗೌಡ ಕಾರ್ಯಕ್ರಮಕ್ಕೆ ಆಹ್ವಾನಿಸಿ ನನ್ನನ್ನು ಬಲವಂತದಿಂದ ಕರೆ ತಂದಿದ್ದರೂ ವೇದಿಕೆ ಮೇಲೆ ಆಸನ ಹಾಕದೇ ನನಗೆ ಅವಮಾನ ಮಾಡಲಾಗಿದೆ, ಬ್ಯಾನರ್‍ನಲ್ಲೂ ನನ್ನ ಹೆಸರಿಲ್ಲ ಎಂದು ವೇದಿಕೆಗೆ ಏರಿ ಏರು ಧ್ವನಿಯಲ್ಲಿ ಪ್ರಶ್ನಿಸಲು ಮುಂದಾದರು. ಆಗ ಎಂ.ಬಿ.ಪಾಟೀಲ ಶಿಷ್ಟಾಚಾರದಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದಾಗ ವಿಜುಗೌಡ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜಿಲ್ಲೆಯ ಸಂಸದರನ್ನೂ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಆಹ್ವಾನಿಸಿಲ್ಲ ಎಂದು ವಿಜುಗೌಡ ಕಿಡಿ ಕಾರಿದರು.ಇದರಿಂದ ಬೇಸರಗೊಂಡ ಸಚಿವ ಸಿ.ಸಿ.ಪಾಟೀಲ ವೇದಿಕೆಯಿಂದ ನಿರ್ಗಮಿಸಲು ಮುಂದಾದರು. ಕೂಡಲೇ ಸಚಿವ ಪಾಟೀಲ ಅವರನ್ನು ಹಿಂಬಾಲಿಸಿದ ಎಂ.ಬಿ.ಪಾಟೀಲ, ಸಚಿವರ ಮನವೊಲಿಸಿ ಮತ್ತೆ ವೇದಿಕೆಗೆ ಕರೆತಂದರು. ಆಗಲೂ ವಿಜುಗೌಡ ಅವರು ಶಿಷ್ಟಾಚಾರದಂತೆ ನನ್ನನ್ನು ಆಹ್ವಾನಿಸುವ ಹಾಗೂ ವೇದಿಕೆಯಲ್ಲಿ ಆಸನದ ವಸ್ಯವಸ್ಥೆ ಮಾಡಿಲ್ಲ ಎಂದು ಸಚಿವ ಸಿ.ಸಿ.ಪಾಟೀಲ ಹರಿಹಾಯ್ದಾಗ ವಿಜುಗೌಡ ಮತ್ತೆ ಶಿಷ್ಟಾಚಾರದ ಪ್ರಶ್ನೆ ಎತ್ತಿ ಆಕ್ರೋಶ ವ್ಯಕ್ತಪಡಿಸಿದರು.