ವಿಜಯನಗರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಸುಪಾರಿ ಕೊಟ್ಟು ಈಗ ಸಿಕ್ಕಿಬಿದ್ದಿರುವ ಘಟನೆ ವಿಜಯಗರದಲ್ಲಿ ನಡೆದಿದೆ. ಹೊಸಪೇಟೆ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್‌ಟೆಬಲ್ ಪರಶುರಾಮ ನಾಯ್ಕ್ ವಿರುದ್ಧ ದೂರು ದಾಖಲಾಗಿದ್ದು, ಈತ ತಲೆ ಮರೆಸಿಕೊಂಡಿದ್ದಾನೆ.
ಗ್ರಾಮ ಪಂಚಾಯಿತಿಯ ಸದಸ್ಯನ ಕೊಲೆಗೆ 10 ಲಕ್ಷ ರೂಪಾಯಿ ನಗದು ಹಾಗೂ ಹೊಸ ಮನೆ ಕಟ್ಟಿಸಿಕೊಡುವ ಭರವಸೆ ಕೊಟ್ಟು ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ.
ಸುಪಾರಿಗೆ ಕಾರಣವೇನು?
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈತನ ಸಹೋದರ ದೇವೇಂದ್ರ ನಾಯ್ಕ್ ಹಾಗೂ ಸೊಸೈಟಿ ಚುನಾವಣೆಯಲ್ಲಿ ತಾಯಿ ಯಮುನಿಬಾಯಿ ಸ್ಪರ್ಧಿಸಿದ್ದರು. ಆದರೆ ಇಬ್ಬರೂ ಸೋತಿದ್ದರು.
.ಇದರಿಂದಾಗಿ ಪರಶುರಾಮ ಪ್ರತಿಸ್ಪರ್ಧಿಯ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. ಸಹೋದರ ದೇವೇಂದ್ರ ನಾಯ್ಕ್ ಸೋಲಿಸಿದ ಆನೇಕಲ್ ತಾಂಡಾದ ಗ್ರಾಮ ಪಂಚಾಯಿತಿ ಸದಸ್ಯ ಪಾಂಡು ನಾಯ್ಕ್ ನ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ ಎನ್ನಲಾಗಿದೆ.
ಆದರೆ ಕೊಲೆ ಮಾಡಲು ಭಯಗೊಂಡ ರವಿ ನಾಯ್ಕ ಸುಪಾರಿ ವಿಷಯ ಪಾಂಡು ನಾಯ್ಕ ತಿಳಿಸಿದ್ದಾರೆ. ಈ ಕುರಿತು ಆಡಿಯೋ ದಾಖಲೆಯೊಂದಿಗೆ ಇದೀಗ ಕಾನ್ಸಟೆಬಲ್ ಪರುಶುರಾಮ್ ನಾಯ್ಕ ವಿರುದ್ಧ ದೂರು ದಾಖಲಾಗಿದೆ.