ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರೇ ಗೆಲ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ ಅವರೇ ನನ್ನ ಮುಂದೆ ಹೇಳಿದ್ದಾರೆ ಎಂದು ಮಾಜಿ ಡಿಸಿಎಂ, ಎಂಎಲ್‍ಸಿ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಾಯವ್ಯ ಕ್ಷೇತ್ರದ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಎಂಎಲ್‍ಸಿ ಲಕ್ಷ್ಮಣ ಸವದಿ ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅದೃಷ್ಟ ಚನ್ನಾಗಿದೆ. ವಾಯವ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನನ್ನ ಗೆಳೆಯ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಅಥಣಿ ಪಟ್ಟಣದವರು. ಮೊನ್ನೆಯಷ್ಟೇ ಸುನೀಲ್ ಸಂಕ್ ನನ್ನ ಜೊತೆಗೆ ಮಾತಿಗೆ ಸಿಕ್ಕಿದ್ದರು. ಸಂಕ್ ನೀನೇಕೆ ಸ್ಪರ್ಧೆ ಮಾಡಿದೆ ಎಂದು ಅವರನ್ನು ಕೇಳಿದೆ. ಮೂರು ಜಿಲ್ಲೆ ವ್ಯಾಪ್ತಿ ಈ ಕ್ಷೇತ್ರ ಹೊಂದಿದೆ ಎಂಬುದೇ ನನಗೆ ಗೊತ್ತಿರಲಿಲ್ಲ. ಗೊತ್ತಾಗಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ.
ಕಾಂಗ್ರೆಸ್ ನಾಯಕರೇ ಟಿಕೆಟ್ ನೀಡಿ, ನಾಮಪತ್ರಕ್ಕೆ ಸಹಿ ಹಾಕಲು ಹೇಳಿದ್ರು. ಹಣಮಂತ ಅಣ್ಣಾ ನಿರಾಣಿಗೆ ಗೆಲ್ಲುತ್ತಾರೆ ಬಿಡಿ ಅಂತಲೂ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ರು. ಹಾಗಾದ್ರೆ ಪತ್ರಿಕಾ ಹೇಳಿಕೆ ನೀಡಿ ಕಣದಿಂದ ಹಿಂದೆ ಸರಿದುಬಿಡು ಎಂದು ಸಂಕ್‍ಗೆ ಹೇಳಿದೆ. ನಮ್ಮ ಅಜ್ಜ, ಅಪ್ಪ ಕಾಂಗ್ರೆಸ್ಸಿನಲ್ಲಿದ್ದರು, ಈ ಕಾರಣಕ್ಕೆ ಸ್ಪರ್ಧಿಸುತ್ತಿರುವೆ ಎಂದು ಸಂಕ್ ಹೇಳಿದ್ದರು ಎಂದು ಸ್ಫೋಟಕ ವಿಚಾರವನ್ನು ಹೊರ ಹಾಕಿದರು.