ಬೆಂಗಳೂರು: ‘ಉಪ್ಪಿ 2’ ಬಿಡುಗಡೆಯಾಗಿ ಸುಮಾರು ಏಳು ವರ್ಷಗಳ ನಂತರ ಉಪೇಂದ್ರ ಕೊನೆಗೂ ನಿರ್ದೇಶನಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರ ‘ಯು/ಐ’ ಶುಕ್ರವಾರ ಅಧಿಕೃತವಾಗಿ ಪ್ರಾರಂಭವಾಗಿದೆ. ಲಹರಿ ಸಂಸ್ಥೆ ಮತ್ತು ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ನಿಮಿರ್ಸುತ್ತಿರುವ ಈ ಚಿತ್ರದ ಮುಹೂರ್ತ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.
ಈ ಮುಹೂರ್ತಕ್ಕೆ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಶಿವರಾಜಕುಮಾರ್, ಧನಂಜಯ್, ವಸಿಷ್ಠ ಸಿಂಹ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಆ ನಂತರ ಉಪೇಂದ್ರ ಮಾಧ್ಯಮದವರೊಂದಿಗೆ ಹಲವು ವಿಷಯಗಳನ್ನು ಮಾತನಾಡಿದರು. ಆದರೆ, ಅಪ್ಪಿತಪ್ಪಿಯೂ ಚಿತ್ರದ ಬಗ್ಗೆ ಮಾತನಾಡಲಿಲ್ಲ ಅಥವಾ ಚಿತ್ರದ ರಹಸ್ಯಗಳನ್ನು ಅವರು ಬಿಟ್ಟುಕೊಡಲಿಲ್ಲ. ತಮ್ಮ ಎಂದಿನ ಶೈಲಿಯಲ್ಲಿ ನಗುತ್ತಲೇ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.
* ಸಿನಿಮಾ ದೃಶ್ಯ ಮಾಧ್ಯಮ. ದೃಶ್ಯ ನೋಡಿ ಕಲ್ಪನೆ ಮಾಡಿಕೊಳ್ಳಬೇಕು. ಒಬ್ಬ ಚಿತ್ರ ಕಲಾವಿದ ಒಂದು ಚಿತ್ರ ಬರೆಯುತ್ತಾನೆ. ಅದನ್ನು ಅವನೇ ಚೆನ್ನಾಗಿದೆ ಎಂದರೆ ಚೆನ್ನಾಗಿರುತ್ತದಾ? ನೀವು ನೋಡಿ ಹೇಳಿದ್ರೆ ಅದಕ್ಕೊಂದು ಬೆಲೆ ಇರುತ್ತದೆ.
* ನಾನು ಯಾವತ್ತೂ ಕನ್ವಿನ್ಸ್ ಮಾಡೋಕೇ ಚಿತ್ರ ಮಾಡೋದು. ಅದರೆ, ಕನ್ಫ್ಯೂಸ್ ಮಾಡ್ತೀನಿ ಅಂದುಕೊಳ್ಳುತ್ತಾರೆ. ಸತ್ಯವೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನಕ್ಕೆ. ಅದು ಯಾರ ತಪ್ಪು? ಕನ್ವಿನ್ಸ್ ಆಗುವವರಿಗೆ ಕನ್ವಿನ್ಸ್ ಮಾಡುತ್ತೇನೆ. ಕನ್ಫ್ಯೂಸ್ ಆಗುವವರು ಯಾವಾಗಲೂ ಕನ್ಫ್ಯೂಸ್ ಆಗಿರುತ್ತಾರೆ.