Breaking News

ತೆರಿಗೆ ಕಡಿಮೆ ಮಾಡದಿದ್ದರೆ ಗಣಿಗಳಲ್ಲೇ ಅದಿರು ಉಳಿಯಲಿದೆ ಎಂಬುದು ಗಣಿ ಉದ್ಯಮಿಗಳ ಆತಂಕ.

Spread the love

ಬಳ್ಳಾರಿ: ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿರುವುದರ ಹಿಂದೆಯೇ ಕೇಂದ್ರ ಸರ್ಕಾರ ಅದಿರು ರಫ್ತು ಮೇಲಿನ ತೆರಿಗೆ ಏರಿಸಿರುವುದರಿಂದ ರಾಜ್ಯದ ಗಣಿಗಳಲ್ಲಿ ದಶಕದಿಂದ ಬಿದ್ದಿರುವ ಸುಮಾರು ಒಂದು ಕೋಟಿ ಟನ್ ಅದಿರು ರಫ್ತು ಪ್ರಕ್ರಿಯೆ ಪುನರಾರಂಭಕ್ಕೆ ಹಿನ್ನಡೆಯಾಗಿದೆ.

ಇದರಿಂದ ಗಣಿ ಉದ್ಯಮಿಗಳು ಮತ್ತೆ ಸಂಕಷ್ಟಕ್ಕೆ ಸಿಕ್ಕಿದ್ದಾರೆ.

ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿಸಿದ ಮರು ದಿನವೇ ಕಾಕತಾಳೀಯ ಎಂಬಂತೆ ಕೇಂದ್ರ ಸರ್ಕಾರ ಅದಿರು ರಫ್ತು ಮೇಲಿನ ತೆರಿಗೆ ಏರಿಸಿದೆ. ಅದಿರು ರಫ್ತಿನ ಮೇಲಿನ ತೆರಿಗೆ ಈ ಮೊದಲು ಶೇ 30ರಷ್ಟಿತ್ತು. ಈಗ ಅದನ್ನು ಶೇ 50ಕ್ಕೆ ಏರಿಸಲಾಗಿದೆ. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿ ‘ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ’ (ಎಫ್‌ಐಎಂಐ-ಫಿಮಿ) ಪ್ರಧಾನ ಮಂತ್ರಿಗೆ ಪ‌ತ್ರ ಬರೆಯಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದ ಕಾರಣಕ್ಕೆ 2011ರಲ್ಲಿ ಅದಿರು ರಫ್ತು ನಿಷೇಧಿಸಲಾಗಿತ್ತು. ಅಂದಿನಿಂದ ‘ಫಿಮಿ’ ಅದಿರು ರಫ್ತಿಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿತ್ತು.

ಗಣಿ ಬಾಧಿತ ಮೂರು ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮಗಳ ಪ್ರಮಾಣದ ಆಧಾರದಲ್ಲಿ ಗಣಿಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದ್ದು, ಎ ಮತ್ತು ಬಿ ವರ್ಗದ ಗಣಿಗಳಲ್ಲಿ 2022ರ ಮಾರ್ಚ್‌ 31ರವರೆಗೆ ಸುಮಾರು 83 ಲಕ್ಷ ಟನ್‌ ಅದಿರು ದಾಸ್ತಾನಿದೆ. ಗುತ್ತಿಗೆ ಅವಧಿ ಮುಗಿದು ಮರು ಹರಾಜಾದ ಎ ಹಾಗೂ ಬಿ ವರ್ಗದ ಗಣಿಗಳಲ್ಲಿ 2.33 ಲಕ್ಷ ಟನ್‌ ಅದಿರು ದಾಸ್ತಾನಿದೆ ಎಂದು ‘ಫಿಮಿ’ ಮೂಲಗಳು ತಿಳಿಸಿವೆ.

ವ್ಯಾಪಕ ಅಕ್ರಮಗಳಿಗೆ ಸಾಕ್ಷಿಯಾದ ಸಿ ವರ್ಗದ ಗಣಿಗಳಲ್ಲಿ 12.25 ಲಕ್ಷ ಟನ್ ಅದಿರಿದೆ. ಈ ಅದಿರು ಸರ್ಕಾರದ ವಶದಲ್ಲಿದ್ದು, ಅದರ ಮಾರಾಟ ಅಧಿ ಕಾರವೂ ಸರ್ಕಾರಕ್ಕಿದೆ. ಇ-ಹರಾಜಿನ ಮೂಲಕ ಮಾರಾಟ ಮಾಡುವುದೇ ಇಲ್ಲವೆ ಬೇರೆ ವಿಧಾನ ಅನುಸರಿಸುವುದೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಹೊರಗೆ ಅಂದರೆ ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಅದಿರು ದಾಸ್ತಾನಿದೆ. 2022ರ ಮಾರ್ಚ್‌ 31ರವರೆಗೆ ರಾಜ್ಯದಲ್ಲಿ ಸುಮಾರು 1.20ಕೋಟಿ ಟನ್‌ ಅದಿರು ದಾಸ್ತಾನಿದ್ದು, ಕೇಂದ್ರ ಸರ್ಕಾರ ರಫ್ತು ಮೇಲಿನ ತೆರಿಗೆ ಕಡಿಮೆ ಮಾಡದಿದ್ದರೆ ಗಣಿಗಳಲ್ಲೇ ಅದಿರು ಉಳಿಯಲಿದೆ ಎಂಬುದು ಗಣಿ ಉದ್ಯಮಿಗಳ ಆತಂಕ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ